ADVERTISEMENT

ಉತ್ತರ ಕನ್ನಡ | ಒಂದೇ ದಿನ 81 ಮಂದಿಗೆ ಕೋವಿಡ್, ಭಟ್ಕಳದಲ್ಲಿ ಮತ್ತಷ್ಟು ಬಿಗಿ ಕ್ರಮ

ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಅಧಿಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 15:36 IST
Last Updated 6 ಜುಲೈ 2020, 15:36 IST

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಸೋಮವಾರ ಒಂದೇ ದಿನ 81 ಜನರಿಗೆ ದೃಢಪಟ್ಟಿದೆ. ಅವರಲ್ಲಿ ಭಟ್ಕಳ ತಾಲ್ಲೂಕಿನಲ್ಲಿ 45,ಕುಮಟಾ ತಾಲ್ಲೂಕಿನಲ್ಲಿ 20 ಮಂದಿಗೆ ಸೋಂಕು ಖಚಿತವಾಗಿದೆ.

ಸೋಂಕಿತರಲ್ಲಿ ಬಹುತೇಕರು ಈಗಾಗಲೇ ಕೋವಿಡ್ ಪೀಡಿತರಾಗಿರುವವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ. ಸೋಂಕಿನ ಮೂಲ ಪತ್ತೆಯಾಗಿರುವ ಕಾರಣ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಚಿಂತೆ ಅಷ್ಟರಮಟ್ಟಿಗೆ ಕಡಿಮೆಯಾಗಿದೆ. ಆದರೆ, ಆರು ಮಂದಿಗೆ ಸೋಂಕು ಎಲ್ಲಿಂದ ಬಂತು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಭಟ್ಕಳದಲ್ಲಿ ಸೋಂಕಿತರ ಪೈಕಿ 39 ಮಂದಿ ಜೂನ್ 30ರಂದು ಕೋವಿಡ್‌ನಿಂದ ಮಂಗಳೂರಿನಲ್ಲಿ ಮೃತಪಟ್ಟ ಯುವಕನ (ರೋಗಿ ಸಂಖ್ಯೆಪಿ 17121) ಮದುವೆಗೆ ಬಂದವರಾಗಿದ್ದಾರೆ. ಅದೇರೀತಿ, 14556 ಸಂಖ್ಯೆಯರೋಗಿಯಿಂದ ಮೂವರಿಗೆ ಸೋಂಕು ಹರಡಿದೆ.ಪಟ್ಟಣದ ಕಂಟೈನ್‌ಮೆಂಟ್ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರಿಗೂ ಕೋವಿಡ್ ದೃಢಪಟ್ಟಿದೆ.ಉಳಿದಂತೆ, ಭಟ್ಕಳಕ್ಕೆ ಮುಂಬೈನಿಂದ ಬಂದ 56 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.

ADVERTISEMENT

ಕುಮಟಾ ತಾಲ್ಲೂಕಿನಲ್ಲಿ ಸೋಂಕಿತರಾದವರ ಪೈಕಿ ಕೋವಿಡ್ ಪೀಡಿತ ಪೊಲೀಸ್ ಕಾನ್‌ಸ್ಟೆಬಲ್ (ರೋಗಿ ಸಂಖ್ಯೆ ಪಿ 15344) ಒಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ರೀತಿ 15 ಮಂದಿಗೆ ಕೋವಿಡ್ ದೃಢಪಟ್ಟಿದೆ. ಮೂವರು ಮಹಾರಾಷ್ಟ್ರದಿಂದ, ಒಬ್ಬರು ಬೆಂಗಳೂರಿನಿಂದ ಮರಳಿದವರು. ಅಲ್ಲದೇ ಒಬ್ಬರಿಗೆ ಜ್ವರದ ಲಕ್ಷಣಗಳೂ (ಐ.ಎಲ್.ಐ) ಕಾಣಿಸಿಕೊಂಡಿದ್ದವು.

ಮಾದನಗೇರಿ ಪ್ರದೇಶದಲ್ಲೇ 13 ಜನರಿಗೆ ಕೋವಿಡ್ ದೃಢಪಟ್ಟಿದೆ. ಅವರಲ್ಲಿ ಒಬ್ಬರು ಸಮೀಪದ ಹಣಕಾಸು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೂ ಸೋಂಕು ಖಚಿತವಾಗಿರುವ ಕಾರಣ ಸಂಸ್ಥೆಯ ಮಾದನಗೇರಿ ಮತ್ತು ಗೋಕರ್ಣ ಶಾಖೆಗಳನ್ನು ಒಂದು ವಾರ ಮುಚ್ಚಲಾಗಿದೆ.

ಹೊನ್ನಾವರ ತಾಲ್ಲೂಕಿನಲ್ಲಿ ಒಂಬತ್ತು ಮಂದಿ ಸೋಂಕಿತರಾಗಿದ್ದು, ಆರು ಮಂದಿಯ ಸೋಂಕಿನ ಮೂಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಇತರ ಮೂವರಲ್ಲಿ30 ವರ್ಷದ ಯುವಕ ಬೆಂಗಳೂರಿನಿಂದ ಬಂದಿದ್ದರೆ, ಸೈನ್ಯದಲ್ಲಿಕರ್ತವ್ಯ ನಿರ್ವಹಿಸುತ್ತಿರುವ 34 ವರ್ಷದ ಪುರುಷ ಜಮ್ಮು ಕಾಶ್ಮೀರದಿಂದ ಮರಳಿದ್ದರು. 32 ವರ್ಷ ಮತ್ತೊಬ್ಬ ಯುವಕ ಚೆನ್ನೈನಿಂದ ವಾಪಸಾಗಿದ್ದರು.

ಕಾರವಾರ ತಾಲ್ಲೂಕಿನ ಐವರು ಸೋಂಕಿತರಲ್ಲಿ ಮೂವರಿಗೆ 13433 ಸಂಖ್ಯೆ ರೋಗಿಯಿಂದ ಕೋವಿಡ್ ಬಂದಿದೆ. ಉಳಿದಂತೆ, ಒಬ್ಬರು ಕುವೈತ್ ದೇಶದಿಂದ ಬಂದವರಾಗಿದ್ದರೆ, ಒಬ್ಬರು ಬೆಂಗಳೂರಿನಿಂದ ಬಂದವರು ಸೇರಿದ್ದಾರೆ. ಯಲ್ಲಾಪುರದ 44 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಅವರು ರೋಗಿ ಸಂಖ್ಯೆ 13437ಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಶಿರಸಿಗೆ ಬೆಂಗಳೂರಿನಿಂದ ಬಂದಿರುವ 42 ವರ್ಷದ ವ್ಯಕ್ತಿಗೂ ಸೋಂಕು ಖಚಿತವಾಗಿದೆ.

ಮಧ್ಯಾಹ್ನ 2ರಿಂದಲೇ ಸ್ಥಗಿತ:ಭಟ್ಕಳತಾಲ್ಲೂಕಿನಲ್ಲಿಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತವು ಮತ್ತಷ್ಟು ಕ್ರಮಗಳನ್ನು ಜಾರಿ ಮಾಡಲು ಮುಂದಾಗಿದೆ.

ತಾಲ್ಲೂಕಿನಲ್ಲಿ ಮಧ್ಯಾಹ್ನ 2ರಿಂದಲೇ ಎಲ್ಲ ವಹಿವಾಟುಗಳನ್ನು ಸ್ಥಗಿತಗೊಳಿಸಬೇಕು. ಮರುದಿನ ಬೆಳಿಗ್ಗೆ 6ರವರೆಗೆ ಸಾರ್ವಜನಿಕರು ಸಂಚರಿಸಬಾರದು.ವೈದ್ಯಕೀಯ ಕಾರಣಗಳನ್ನು ಮಾತ್ರ ಇದರಿಂದ ಹೊರಗಿಡಲಾಗಿದೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ಈ ಮೊದಲು ಜಿಲ್ಲೆಯ ಇತರ ತಾಲ್ಲೂಕುಗಳ ಮಾದರಿಯಲ್ಲಿ ಸಂಜೆ 8ರಿಂದ ಬೆಳಿಗ್ಗೆ 6ರವರೆಗೆ ನಿರ್ಬಂಧ ಜಾರಿ ಮಾಡಲಾಗಿತ್ತು. ಅದನ್ನು ತಿದ್ದುಪಡಿ ಮಾಡಲಾಗಿದೆ.

ವಾಸ್ತವ್ಯಕ್ಕೆಂದು ಪ್ರವೇಶ ನಿಷೇಧ:ಭಟ್ಕಳ ತಾಲ್ಲೂಕಿನಲ್ಲಿ ಕೋವಿಡ್ 19 ಹೆಚ್ಚುತ್ತಿರುವ ಕಾರಣ ಪುರಸಭೆ ವ್ಯಾಪ್ತಿಯಲ್ಲಿ ಹೊರ ತಾಲ್ಲೂಕುಗಳು, ಹೊರ ಜಿಲ್ಲೆಗಳು, ರಾಜ್ಯಗಳು ಮತ್ತು ವಿದೇಶಗಳಿಂದ ವಾಸ್ತವ್ಯಕ್ಕೆಂದು ಜನ ಬರುವುದನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

‘ಈ ಆದೇಶವು ಜುಲೈ 10ರಿಂದ ಮುಂದಿನಸೂಚನೆಯವರೆಗೆಜಾರಿಯಲ್ಲಿರಲಿದೆ. ಭಟ್ಕಳದ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಇದು ಅನ್ವಯವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

––––

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

435

ಒಟ್ಟು ಸೋಂಕಿತರು

165

ಗುಣಮುಖರಾದವರು

269

ಸಕ್ರಿಯ ಪ್ರಕರಣಗಳು

1

ಮೃತಪಟ್ಟವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.