
ಕಾರವಾರ: ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಜಿಲ್ಲೆಯ ಶಿವತಾಣಗಳಲ್ಲಿ ಭಕ್ತಿ–ಭಾವದ ಜೊತೆಗೆ ಸಂಭ್ರಮದಿಂದ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸಿದರು.
ನಸುಕಿನ ಜಾವದಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂತು. ಶಿವರಾತ್ರಿ ಅಂಗವಾಗಿ ಶಿವಲಿಂಗಗಳಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಬಹುತೇಕ ಕಡೆಗಳಲ್ಲಿ ಭಕ್ತರಿಗೆ ಶಿವಲಿಂಗಗಳಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಪಂಚಲಿಂಗ ಕ್ಷೇತ್ರಗಳ ಪೈಕಿ ಒಂದೆನಿಸಿರುವ ತಾಲ್ಲೂಕಿನ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನ, ಬಾಡದ ಮಹಾದೇವ ದೇವಸ್ಥಾನ, ಕಾಲರುದ್ರೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ ಅರ್ಪಿಸಿ ಕೃತಾರ್ಥರಾದರು. ಗ್ರಾಮೀಣ ಭಾಗದ ಶಿವ ದೇವಾಲಯಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕಡಲತೀರಗಳಲ್ಲಿಯೂ ಹಲವರು ಮರಳಿನ ಶಿವಲಿಂಗ ರಚಿಸಿ, ಪೂಜೆ ಸಲ್ಲಿಸಿದರು. ಶಿವರಾತ್ರಿ ಅಂಗವಾಗಿ ಭಕ್ತರು ನದಿ, ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿದರು. ಶಿವನ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ತಡರಾತ್ರಿವರೆಗೂ ನಡೆದವು.
ಗೋಕರ್ಣ, ಮುರ್ಡೇಶ್ವರ, ಯಾಣ, ಬನವಾಸಿ, ಕವಳಾ ಗುಹೆ, ಸಹಸ್ರಲಿಂಗ ಸೇರಿದಂತೆ ಪ್ರಮುಖ ಶಿವತಾಣಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ಹಬ್ಬದ ಅಂಗವಾಗಿ ಪ್ರಮುಖ ತಾಣಗಳಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಶಿವತಾಣಗಳಿಗೆ ತೆರಳುವ ಬಸ್‍ಗಳು ಜನದಟ್ಟಣೆಯೊಂದಿಗೆ ಸಂಚರಿಸಿದವು.
ಹಬ್ಬದ ಅಂಗವಾಗಿ ಉಪವಾಸ ವ್ರತಾಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಗೆಣಸು, ಹಣ್ಣು ಹಂಪಲುಗಳಿಗೆ ಬೇಡಿಕೆ ಹೆಚ್ಚಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.