ADVERTISEMENT

ಉತ್ತರ ಕನ್ನಡ | ದಾಖಲಾಗದ ವಾಸ್ತವ ಬೆಳೆ; ತೊಂದರೆ

ಬೆಳೆ ವಿವರ ಕಾಲಂನಲ್ಲಿ ಕೈಬಿಟ್ಟ ಬೆಳೆ ಹೆಸರು; ಬೆಳೆ ಸಾಲ ವಿಳಂಬ

ರಾಜೇಂದ್ರ ಹೆಗಡೆ
Published 26 ಮೇ 2025, 4:32 IST
Last Updated 26 ಮೇ 2025, 4:32 IST
ರೈತರಿಗೆ ಬೆಳೆಸಾಲ ಮಂಜೂರು ಮಾಡಲಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಕಚೇರಿ
ರೈತರಿಗೆ ಬೆಳೆಸಾಲ ಮಂಜೂರು ಮಾಡಲಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಕಚೇರಿ   

ಶಿರಸಿ: ನೂತನ ಪಹಣಿ ಪತ್ರಿಕೆ (ಆರ್‌ಟಿಸಿ) ನೀಡಿ ಸಹಕಾರ ಸಂಘಗಳ ಮೂಲಕ ಬೆಳೆ ಸಾಲ ಪಡೆಯಲು ಕೆಲವೇ ದಿನ ಬಾಕಿಯುಳಿದರೂ ಆರ್‌ಟಿಸಿಯ ಬೆಳೆ ವಿವರ ಕಾಲಂನಲ್ಲಿ ವಾಸ್ತವದ ಬೆಳೆ ಹೆಸರು ದಾಖಲಾಗದ ಹಿನ್ನೆಲೆಯಲ್ಲಿ ರೈತರು ಬೆಳೆ ದಾಖಲೆಯ ದೃಢೀಕರಣಕ್ಕಾಗಿ ತಹಶೀಲ್ದಾರ್‌ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಸಹಕಾರ ಸಂಘಗಳ ಮೂಲಕ ಈಗಾಗಲೇ ಪ್ರಸಕ್ತ ಸಾಲಿನ ಬೆಳೆಸಾಲ ಪಡೆಯಲು ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಅದನ್ನು ಸಹಕಾರ ಸಂಘಗಳು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಸಲ್ಲಿಸಬೇಕಾಗಿದೆ. ಆದರೆ ಕೆಲ ರೈತರ ಆರ್‌ಟಿಸಿಯಲ್ಲಿ ಬೆಳೆ ವಿವರ ನಮೂದಾಗದೆ ಖಾಲಿ ಇರುವ ಕಾರಣಕ್ಕೆ ದಾಖಲೆ ಪತ್ರಗಳನ್ನು ಸಲ್ಲಿಸಲು ತೊಂದರೆಯಾಗಿದ್ದು, ಇದರಿಂದ ರೈತರಿಗೆ ದೊರೆಯಬೇಕಾದ ಬೆಳೆ ಸಾಲ ಇನ್ನಷ್ಟು ವಿಳಂಬವಾಗಲಿದೆ. ಮೇ 31 ಬೆಳೆ ಸಾಲಕ್ಕೆ ಅರ್ಜಿಸಲ್ಲಿಸಲು ಕೊನೆಯ ದಿನವಾಗಿದೆ. 

ಬೆಳೆಸಾಲ ಪಡೆಯಲು ರೈತರು ಪ್ರಮುಖವಾಗಿ ಪ್ರಸಕ್ತ ಸಾಲಿನ ಆರ್‌ಟಿಸಿ, ಪ್ರೂಟ್ ಐಡಿ ಮತ್ತು ಕೆಡಿಸಿಸಿ ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿಯನ್ನು ಒದಗಿಸಬೇಕು. ಬೆಳೆ ವಿವರ ಮಾಹಿತಿಯನ್ನು ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಂಡು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಸಲ್ಲಿಸಲಾಗುತ್ತದೆ. ಆದರೆ ಕೆಲ ರೈತರ ಆರ್‌ಟಿಸಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಮುಖ ಬೆಳೆಯೇ  ನಮೂದಾಗಿಲ್ಲ. ಕಾರಣ ರೈತರಿಗೆ ಬೆಳೆಸಾಲ ಪಡೆಯಲು ಮತ್ತು ವಿಮೆ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ದೂರಾಗಿದೆ. 

ADVERTISEMENT

‘ರೈತರು ಬೆಳೆಸಾಲ ಮರುಪಾವತಿಗೆ ಬೇರೆಡೆ ಕೈಗಡ ಸಾಲ ಪಡೆದುಕೊಂಡು ಭರಣ ಮಾಡುತ್ತಾರೆ. ಆರ್‌ಟಿಸಿಯಲ್ಲಿ ನಿರ್ದಿಷ್ಟ ಬೆಳೆ ದಾಖಲು ಇಲ್ಲದ ಕಾರಣ ಸಾಲ ದೊರೆಯುತ್ತಿಲ್ಲ. ದೃಢೀಕರಣ ಪಡೆದು ಅದನ್ನು ಸಲ್ಲಿಸಲು ಕನಿಷ್ಠ 15–20 ದಿನ ಕಾಯಬೇಕಾಗಿದೆ. ಕೈಗಡ ಸಾಲ ಪಡೆದಿರುವುದನ್ನು ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ ಹಳೆಯ ಆರ್‌ಟಿಸಿ ಪಡೆದು ಸಾಲ ನೀಡಿದರೆ ಸಹಕಾರ ಸಂಘಗಳಿಗೂ ಹಾಗೂ ರೈತರಿಗೂ ಒಳಿತು’ ಎಂದು ಹೆಸರು ಹೇಳಲಿಚ್ಛಿಸದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.

ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾಗದ ಕಾರಣಕ್ಕೆ ಮಾಹಿತಿ ಅಪ್‌ಲೋಡ್ ಆಗುತ್ತಿಲ್ಲ. ದೃಢೀಕರಣದ ದಾಖಲೆ ಒದಗಿಸಿ, ಪುನಃ ಅಪ್‌ಲೋಡ್ ಮಾಡಬೇಕಿದೆ. ಇದರಿಂದ ರೈತರಿಗೆ ಬೆಳೆಸಾಲ ಪಡೆಯಲು ವಿಳಂಬವಾಗುತ್ತಿದೆ. ನಮಗೂ ಅನಗತ್ಯ ಕೆಲಸದ ಹೊರೆ ಹೆಚ್ಚುತ್ತಿದೆ’ ಎಂದು ಸೊಸೈಟಿಯೊಂದರ ಕಾರ್ಯದರ್ಶಿ ಹೇಳಿದರು.

‘ಸರ್ಕಾರದಿಂದ ಪ್ರತಿ ವರ್ಷವೂ ಆರ್‌ಟಿಸಿಯಲ್ಲಿ ಬೆಳೆ ವಿವರ ಮತ್ತು ಕ್ಷೇತ್ರವನ್ನು ಆನ್‌ಲೈನ್ ಮೂಲಕ ತಂತ್ರಾಂಶದಲ್ಲಿ ದಾಖಲೀಕರಣ ಮಾಡಬೇಕಾಗುತ್ತದೆ. ಪ್ರತಿ ವರ್ಷವೂ ಕೆಲ ರೈತರ ಆರ್‌ಟಿಸಿಯಲ್ಲಿ ಬೆಳೆ ವಿವರ ನಮೂದಾಗುತ್ತಿಲ್ಲ. ಸ್ವಾಫ್ಟ್‌ವೇರ್ ಸರಿಪಡಿಸುವತ್ತ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗೆ ಗಮನವಹಿಸಬೇಕಿದೆ. ಕಳೆದ ವರ್ಷ ಹಳೆ ಆರ್‌ಟಿಸಿಯನ್ನು ನೀಡಬಹುದಿತ್ತು. ಈ ವರ್ಷದಿಂದ ಕಡ್ಡಾಯವಾಗಿ ಹೊಸ ಆರ್‌ಟಿಸಿ ನೀಡಬೇಕಾದ್ದರಿಂದ ಸಮಸ್ಯೆಗೆ ಕಾರಣವಾಗಿದೆ. ನಿಯಮ ಬದಲಾಯಿಸಿ ಹಳೆ ಆರ್‌ಟಿಸಿ ಮೂಲಕ ಸಾಲ ವಿತರಣೆಗೆ ಕ್ರಮವಾಗಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಕಚೇರಿಗೆ ಅಲೆದಾಡಿ ಸುಸ್ತಾದ ರೈತರು

‘ರೈತರು ಅಡಿಕೆ ಬೆಳೆ ವಿವರ ನಮೂದು ಮಾಡಿಕೊಳ್ಳಲು ತಹಶೀಲ್ದಾರ್ ಬಳಿ ಭತ್ತದ ಬೆಳೆ ವಿವರ ನಮೂದಿಗೆ ಗ್ರಾಮ ಲೆಕ್ಕಾಧಿಕಾರಿ ಬಳಿ ತೆರಳಿ ಕಂಪ್ಯೂಟರ್ ದೃಢೀಕರಣ ಪಡೆದುಕೊಂಡು ಪುನಃ ಸಹಕಾರ ಸಂಘಗಳಿಗೆ ಸಲ್ಲಿಸಬೇಕು. ಗ್ರಾಮ ಲೆಕ್ಕಾಧಿಕಾರಿ ಪುನಃ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ಎಲ್ಲ ಕಾರ್ಯುಕ್ಕೆ ಕನಿಷ್ಠ 15 ದಿನ ಕಾಲಾವಕಾಶ ಅಗತ್ಯವಿದೆ. ಅಲ್ಲಿಯವರೆಗೆ ಮೊದಲ ಹಂತದ ಬೆಳೆ ಸಾಲದ ಅರ್ಜಿ ಸಲ್ಲಿಕೆಯಾಗುತ್ತದೆ. 2ನೇ ಹಂತದ ಬೆಳೆ ಸಾಲ ಪಡೆಯಲು ತಿಂಗಳು ಕಾಲ ಕಾಯಬೇಕು. ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿ ಸುಸ್ತಾಗುವಂತಾಗಿದೆ’ ಎನ್ನುತ್ತಾರೆ ಕೃಷಿಕರಾದ ನರಸಿಂಹ ಹೆಗಡೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.