ADVERTISEMENT

ಉತ್ತರ ಕನ್ನಡ | ಸಾಮಾಜಿಕ ಸಮೀಕ್ಷೆ ಶೇ 66.79 ಪೂರ್ಣ

ಗಣತಿದಾರರಲ್ಲಿ ಮುಗಿಯದ ಗೊಂದಲ:ಇಂದು ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:01 IST
Last Updated 7 ಅಕ್ಟೋಬರ್ 2025, 7:01 IST
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದ ಮನೆಯೊಂದರ ಸದಸ್ಯರಿಂದ ಗಣತಿದಾರರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಹಿತಿ ಸಂಗ್ರಹಿಸಿದರು.
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದ ಮನೆಯೊಂದರ ಸದಸ್ಯರಿಂದ ಗಣತಿದಾರರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಹಿತಿ ಸಂಗ್ರಹಿಸಿದರು.   

ಕಾರವಾರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಕ್ತಾಯಕ್ಕೆ ಸರ್ಕಾರ ನಿಗದಿಪಡಿಸಿದಂತೆ ಮಂಗಳವಾರ ಮುಕ್ತಾಯಗೊಳ್ಳಬೇಕಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ಶೇ 66.79ರಷ್ಟು ಸಮೀಕ್ಷೆ ಮಾತ್ರ ನಡೆದಿದೆ.

ಜಿಲ್ಲೆಯಲ್ಲಿ 4,23,483 ಕುಟುಂಬಗಳ ಸಮೀಕ್ಷೆಯ ಗುರಿ ನಿಗದಿಪಡಿಸಲಾಗಿದ್ದು, ಸೋಮವಾರ ಸಂಜೆ 7 ಗಂಟೆಯ ವೇಳೆಗೆ 2,82,838 ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಸಮೀಕ್ಷೆ ಮಂಗಳವಾರ ಸಂಜೆಯೇ ಕೊನೆಗೊಂಡರೆ ಒಂದೇ ದಿನದಲ್ಲಿ 1,40,645 ಕುಟುಂಬಗಳ ಮಾಹಿತಿ ಸಂಗ್ರಹಿಸುವ ಸವಾಲು ಗಣತಿದಾರರಿಗೆ ಎದುರಾಗಲಿದೆ.

ಸಮೀಕ್ಷೆಗೆ 2,916 ಬ್ಲಾಕ್‌ಗಳನ್ನು ರಚಿಸಿದ್ದು, 3,389 ಗಣತಿದಾರರು ಸೆ.22 ರಿಂದ ಸಮೀಕ್ಷೆ ಆರಂಭಿಸಿದ್ದರು. ದಸರಾ ರಜೆ ಅವಧಿಯನ್ನು ಬಹುತೇಕ ಪ್ರಾಥಮಿಕ ಶಾಲೆಯ ಶಿಕ್ಷಕರು ಸಮೀಕ್ಷೆ ಪ್ರಕ್ರಿಯೆಯಲ್ಲೇ ಕಳೆದಿದ್ದಾರೆ. ಅ.8 ರಂದು ಶಾಲೆ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಮೀಕ್ಷೆ ಮುಗಿಸುವ ಒತ್ತಡಕ್ಕೆ ಸಿಲುಕಿದ್ದಾರೆ.

ADVERTISEMENT

‘ಆಯೋಗ ನಿಗದಿಪಡಿಸಿದಂತೆ ಯುಎಚ್‌ಐಡಿ ಸಂಖ್ಯೆ ಹಂಚಿಕೆ ಮಾಡಿರುವ 3,26,860 ಕುಟುಂಬಗಳನ್ನು ಆನ್‌ಲೈನ್ ಮೂಲಕ, ಯುಎಚ್‌ಐಡಿ ಸಂಖ್ಯೆ ಹೊಂದಿಲ್ಲದ 96,623 ಕುಟುಂಬಗಳನ್ನು ಆಫ್‌ಲೈನ್ ಮೂಲಕ (ಗುಂಪು ಸಮೀಕ್ಷೆ) ಸಮೀಕ್ಷೆ ನಡೆಸಬೇಕಾಗಿದೆ. ಆನ್‌ಲೈನ್ ಸಮೀಕ್ಷೆ ಪ್ರಕ್ರಿಯೆ ಶೇ 86.53ರಷ್ಟು ಪೂರ್ಣಗೊಂಡಿದೆ. ಒಟ್ಟಾರೆ ಸಮೀಕ್ಷೆ ಇನ್ನೂ ನಿಧಾನಗತಿಯಲ್ಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸಮೀಕ್ಷೆ ಪ್ರಕ್ರಿಯೆ ಉದ್ದಕ್ಕೂ ಗೊಂದಲಗಳನ್ನು ಎದುರಿಸಿದ್ದೇವೆ. ಆರಂಭದಲ್ಲಿ ಸಮೀಕ್ಷೆಗೆ ಸಿದ್ಧಪಡಿಸಿದ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿತ್ತು. ಬಳಿಕ ಆ್ಯಪ್‌ನಲ್ಲಿ ನಮೂದಾಗಿದ್ದ ಯುಎಚ್‌ಐಡಿ ಸಂಖ್ಯೆಗೂ, ಸಮೀಕ್ಷೆಗೆ ನಿಗದಿಪಡಿಸಿದ ಪ್ರದೇಶದ ಮನೆಗಳಿಗೆ ನೀಡಿದ್ದ ಯುಎಚ್‌ಐಡಿ ಸಂಖ್ಯೆಗೂ ವ್ಯತ್ಯಾಸ ಕಾಣಿಸಿತ್ತು. ಕೊನೆ ಕ್ಷಣದಲ್ಲಿ ಗಣತಿದಾರರು ನಿಗದಿಪಡಿಸಿದ ಪ್ರದೇಶದ ಯಾವುದೇ ಮನೆಯಲ್ಲೂ ಸಮೀಕ್ಷೆ ನಡೆಸಬಹುದು ಎಂಬ ಸೂಚನೆ ಬಂತು. ನಮಗೆ ಗೊತ್ತು ಮಾಡಿದ ಮನೆಗಳಲ್ಲಿ ಬೇರೆ ಗಣತಿದಾರರು ಮಾಹಿತಿ ಸಂಗ್ರಹಿಸಿದ್ದರು’ ಎಂದು ಗಣತಿದಾರರೊಬ್ಬರು ಸಮಸ್ಯೆ ಹೇಳಿಕೊಂಡರು. 

ಆನ್‌ಲೈನ್ ಸಮೀಕ್ಷೆ ಪ್ರಕ್ರಿಯೆ ಬಹುತೇಕ ಪೂರ್ಣ ಹಂತಕ್ಕೆ ಬಂದಿದೆ. ಆಫ್‌ಲೈನ್ ಸಮೀಕ್ಷೆ ಇನ್ನೂ ಬಾಕಿ ಇದೆ

– ಶಿವಕ್ಕ ಮಾದರ ಹಿಮದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ

ಕಾರವಾರ ಯಲ್ಲಾಪುರ ನಿಧಾನ ‘ಒಟ್ಟಾರೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಕ್ರಿಯೆ ಕಾರವಾರದಲ್ಲಿ ಶೇ 48.42 ಯಲ್ಲಾಪುರದಲ್ಲಿ ಶೇ 49.01 ರಷ್ಟು ಮಾತ್ರ ಮುಗಿದಿದೆ. ಈ ತಾಲ್ಲೂಕುಗಳಲ್ಲಿ ಆನ್‌ಲೈನ್ ಸಮೀಕ್ಷೆಯೂ ನಿಧಾನಗತಿಯಲ್ಲಿದೆ. ಹೊನ್ನಾವರದಲ್ಲಿ ಶೇ 111.61 ಅಂಕೋಲಾದಲ್ಲಿ ಶೇ 106.91 ಮತ್ತು ಹಳಿಯಾಳದಲ್ಲಿ ಶೇ 96.17ರಷ್ಟು ಸಮೀಕ್ಷೆ ಮುಕ್ತಾಯವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.