ಶಿರಸಿ: ಜಿಲ್ಲೆಗೊಂದು ಸಿಂಥೆಟಿಕ್ ಕ್ರೀಡಾಂಗಣ ಎಂಬ ರಾಷ್ಟ್ರೀಯ ಕ್ರೀಡಾ ನೀತಿಯಿಂದ ಉತ್ತರ ಕನ್ನಡ ಜಿಲ್ಲೆಯು ವಂಚಿತವಾಗಿದೆ ಎಂದು ಸ್ಪಂದನಾ ಸ್ಪೋಟ್ಸ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಖೇದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅತೀ ಹೆಚ್ಚಿನ ವಿಸ್ತಾರ ಹೊಂದಿರುವ ಶಿರಸಿಯಲ್ಲಿನ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣ ಖ್ಯಾತಿ ಪಡೆದಿದೆ. ಆದರೆ, ಭೌಗೋಳಿಕವಾಗಿ ಉತ್ತರ ಕನ್ನಡಕ್ಕಿಂತಲೂ ಚಿಕ್ಕದಾಗಿರುವ ಕೊಡಗು, ಉಡುಪಿ, ಗದಗ, ಕೊಪ್ಪಳ, ಹಾವೇರಿ, ಬೀದರ್, ಕೋಲಾರ, ವಿಜಯನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರುಗಳಲ್ಲಿ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಅಲ್ಲದೇ, ಉತ್ತರ ಕರ್ನಟಕ ಬಯಲು ಸೀಮೆಗಳಂತಾದ ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥೆಟಿಕ್ ಕ್ರೀಡಾಂಗಣ ಹೊಂದಿದೆ. ಆದರೆ, ಮಳೆ ಹೆಚ್ಚಿರುವ ಮಲೆನಾಡು ಮತ್ತು ಕರಾವಳಿ ಪ್ರದೇಶ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಿಂಥೆಟಿಕ್ ಕ್ರೀಡಾಂಗಣದಿಂದ ವಂಚಿತರಾಗಿರುವುದು ವಿಷಾದಕರವೆಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ದಶಕದಿಂದ ಕ್ರೀಡಾಸಕ್ತರು ಜಿಲ್ಲಾ ಕ್ರೀಡಾಂಗಣ ಶಿರಸಿಯಲ್ಲಿರುವ ಮಾರಿಕಾಂಬಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ನೆಲಹಾಸು, ತರಬೇತುದಾರುರು, ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಆಧುನಿಕ ಉಪಕರಣಗಳ ಕೊರತೆ, ಭದ್ರತೆ ಇಲ್ಲದ ಆವರಣ, ಹೊರಾಂಗಣ ಗಿಡ ಗಂಟೆಯಿಂದ ತುಂಬಿರುವುದು ಹಾಗೂ ಬೆಳಕಿನ ಕೊರತೆಗಳು ಕಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕ್ರೀಡಾ ವರ್ಷದ ಪ್ರಾರಂಭದಲ್ಲಿಯೇ ತೀವ್ರ ಮಳೆಗಾಲ ಎದುರಿಸಬೇಕಾದ ಕ್ರೀಡಾ ಪಟುಗಳಿಗೆ ಸುಸಜ್ಜಿತ ಕ್ರೀಡಾಗಂಗಣ ಅತೀ ಅವಶ್ಯ. ಆದರೆ ಅವೈಜ್ಞಾನಿಕ ಮತ್ತು ಮಳೆಯಲ್ಲಿಯೇ ಕ್ರೀಡಾಕೂಟ ಜರುಗುತ್ತಿರುವುದು ಖೇದಕರ ಸಂಗತಿ. ಕ್ರೀಡಾಂಗಣದ ಭೌತಿಕ ಸಾಮರ್ಥ್ಯ ಹೆಚ್ಚಿಸುವ ಜತೆಯಲ್ಲಿ ಮೂಲ ಸೌಕರ್ಯ ಮತ್ತು ಸೌಲಭ್ಯಕ್ಕೆ ಒತ್ತು ನೀಡಬೇಕಾದ ಅಗತ್ಯತೆಯಿದೆ. ಮಳೆಗಾಲದಲ್ಲಿ ಓಟದ ಪಥ ಕೆಸರು ಗದ್ದೆಯಾಗಿ ಮಳೆಗಾಲದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಕೆಸರುಗದ್ದೆಯಲ್ಲಿ ಓಡಿದ ಅನುಭವವಾಗುವುತ್ತಿದೆ’ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದರೂ ಸರ್ಕಾರದ ಸೌಲಭ್ಯ ಮತ್ತು ಪ್ರೋತ್ಸಾಹದ ಕೊರತೆಯಿಂದ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿರುವುದು ವಿಷಾದಕರ.– ರವೀಂದ್ರ ನಾಯ್ಕ, ಸ್ಪಂದನಾ ಸ್ಪೋಟ್ಸ್ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.