ಕಾರವಾರ: ಸಾಂಪ್ರದಾಯಿಕ ವಿಧಾನದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರನ್ನು ಒಳಗೊಂಡ ಗ್ರಾಮಗಳ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕರಾವಳಿ ಸ್ಥಿತಿಸ್ಥಾಪಕ ಗ್ರಾಮ’ (ಕೋಸ್ಟಲ್ ರೆಸಿಲಿಯಂಟ್ ವಿಲೇಜ್) ಯೋಜನೆಗೆ ದೇಶದ ನೂರು ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಅವುಗಳ ಪೈಕಿ ಜಿಲ್ಲೆಯ ಎರಡು ಗ್ರಾಮಗಳು ಸೇರಿವೆ.
ಭಟ್ಕಳ ತಾಲ್ಲೂಕಿನ ಬೈಲೂರು ಮತ್ತು ಮಠದಹಿತ್ಲು ಗ್ರಾಮ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ಭಾಗವಾಗಿರುವ ಕರಾವಳಿ ಸ್ಥಿತಿಸ್ಥಾಪಕ ಗ್ರಾಮ ಯೋಜನೆಗೆ ಆಯ್ಕೆಯಾಗಿವೆ. ಗ್ರಾಮದಲ್ಲಿರುವ ಮೀನುಗಾರರ ಬೇಡಿಕೆ ಪಟ್ಟಿ ಸಂಗ್ರಹಿಸಲು ಅಧಿಕಾರಿಗಳು ಸ್ಥಳೀಯರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಿದ್ದಾರೆ.
ಹವಾಮಾನ ಬದಲಾವಣೆಯಿಂದ ಮೀನುಗಾರಿಕೆ ಕ್ಷೇತ್ರದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮದಿಂದ ತೊಂದರೆಗೆ ಒಳಗಾಗಿರುವ ಮೀನುಗಾರರ ನೆರವಿಗೆ ಯೋಜನೆ ರೂಪಿಸಿದ್ದು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆಯ್ದ ಗ್ರಾಮಗಳನ್ನು ಆಯ್ಕೆ ಮಾಡಿ, ಯೋಜನೆ ಜಾರಿಗೆ ತರಲು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆ ಮುಂದಾಗಿದೆ. ಗ್ರಾಮದ ಜನರ ಆರ್ಥಿಕಮಟ್ಟ ಸುಧಾರಿಸವ ಯೋಜನೆ ಜಾರಿಯ ಜೊತೆಗೆ, ಮೀನುಗಾರಿಕೆ ಕ್ಷೇತ್ರಕ್ಕೆ ಪೂರಕವಾಗಿ ಹವಾಮಾನ ಸ್ಥಿತಿ ಸ್ಥಿರವಾಗಿಡಲು ಕಾಂಡ್ಲಾ, ಸಮುದ್ರ ಕಳೆಗಳ ನಾಟಿಯಂತಹ ಹಲವು ಯೋಜನೆಗಳನ್ನು ಇದು ಒಳಗೊಂಡಿದೆ.
‘ಕರಾವಳಿ ಸ್ಥಿತಿಸ್ಥಾಪಕ ಗ್ರಾಮ ಯೋಜನೆಗೆ ಆಯ್ಕೆ ಮಾಡಿರುವ ಬೈಲೂರು, ಮಠದಹಿತ್ಲು ಗ್ರಾಮದಲ್ಲಿ ಮೀನುಗಾರ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ಈ ಗ್ರಾಮವನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಯೋಜನೆಯ ಮಾರ್ಗಸೂಚಿ ಆಧರಿಸಿ ಗ್ರಾಮಸ್ಥರೊಂದಿಗೆ ಸಂವಹನ ನಡೆಸಲಾಗಿದೆ. ಜನರ ಬೇಡಿಕೆ ಆಧರಿಸಿ, ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆಯ ಭಟ್ಕಳದ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ ತಿಳಿಸಿದರು.
‘ಎರಡೂ ಗ್ರಾಮಗಳ ಕಡಲತೀರಗಳಲ್ಲಿ ಮೀನುಗಾರಿಕೆ ಪರಿಕರಗಳ ದಾಸ್ತಾನಿಗೆ ವ್ಯವಸ್ಥೆ, ಬಲೆಗಳ ದುರಸ್ತಿಗೆ ಶೆಡ್, ಸುಸಜ್ಜಿತ ಮೀನು ಮಾರುಕಟ್ಟೆ, ಒಣಮೀನು ಸಿದ್ಧಪಡಿಸಲು, ಮಂಜುಗಡ್ಡೆ ದಾಸ್ತಾನಿಗೆ ಸೌಕರ್ಯಗಳನ್ನು ಒದಗಿಸುವಂತೆ ಜನರ ಬೇಡಿಕೆ ಇದೆ. ಪ್ರತಿ ಕುಟುಂಬಕ್ಕೆ ತಲಾ ಒಂದು ಪಾತಿದೋಣಿ, ಜೀವರಕ್ಷಕ ಜಾಕೆಟ್, ಸೋಲಾರ್ ದೀಪ ಒದಗಿಸುವ ಬಗ್ಗೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ. ಇವೆಲ್ಲ ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ’ ಎಂದೂ ವಿವರಿಸಿದರು.
ಬೈಲೂರಿನಲ್ಲಿ 1,600, ಮಠದಹಿತ್ಲುವಿನಲ್ಲಿ 2,000 ಮೀನುಗಾರರ ಸಂಖ್ಯೆ ಮೂಲಸೌಕರ್ಯಗಳ ಜೊತೆಗೆ ಹವಾಮಾನ ಸ್ಥಿರವಾಗಿಡಲು ಯೋಜನೆ ಮೀನುಗಾರರೊಂದಿಗೆ ನಿರಂತರ ಸಂವಹನ
ಸಾಂಪ್ರದಾಯಿಕ ಮೀನುಗಾರರನ್ನು ಒಳಗೊಂಡಿರುವ ಗ್ರಾಮದ ಸುಧಾರಣೆಗೆ ಯೋಜನೆ ನೆರವಾಗಲಿದ್ದು ಪ್ರತಿ ಗ್ರಾಮಕ್ಕೆ ತಲಾ ₹2 ಕೋಟಿ ಅನುದಾನ ಸಿಗಲಿದೆಬಬಿನ್ ಬೋಪಣ್ಣ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.