ADVERTISEMENT

ಉತ್ತರ ಕನ್ನಡ: ನದಿಯಂಚಿನ ಗ್ರಾಮಗಳಲ್ಲೇ ಜಲದಾಹ

ಮಳೆಗಾಲದಲ್ಲಿ ಅತಿವೃಷ್ಟಿಯಾದರೂ ಬೇಸಿಗೆಯಲ್ಲಿ ನೀರಿಗೆ ಬರ

ಗಣಪತಿ ಹೆಗಡೆ
Published 10 ಏಪ್ರಿಲ್ 2025, 7:29 IST
Last Updated 10 ಏಪ್ರಿಲ್ 2025, 7:29 IST
ಕಾರವಾರ ತಾಲ್ಲೂಕಿನ ತೊಡೂರು ಗ್ರಾಮದ ಸೀಬರ್ಡ್ ಕಾಲೊನಿಯಲ್ಲಿ ತೆರೆದ ಬಾವಿಯಿಂದ ನೀರು ಪಡೆಯುವುದಕ್ಕೆ ಪ್ರತಿನಿತ್ಯ ಮಹಿಳೆಯರು ಕೊಡಗಳೊಂದಿಗೆ ಸರದಿ ನಿಲ್ಲುತ್ತಾರೆ
ಕಾರವಾರ ತಾಲ್ಲೂಕಿನ ತೊಡೂರು ಗ್ರಾಮದ ಸೀಬರ್ಡ್ ಕಾಲೊನಿಯಲ್ಲಿ ತೆರೆದ ಬಾವಿಯಿಂದ ನೀರು ಪಡೆಯುವುದಕ್ಕೆ ಪ್ರತಿನಿತ್ಯ ಮಹಿಳೆಯರು ಕೊಡಗಳೊಂದಿಗೆ ಸರದಿ ನಿಲ್ಲುತ್ತಾರೆ   

ಕಾರವಾರ: ‘ಪ್ರತಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಹರಿದು ಬರುವ ಕೊಳವೆ ಮಾರ್ಗದಲ್ಲಿ ಅಲ್ಲಲ್ಲಿ ಸೋರಿಕೆಯಾಗುವ ಕಾರಣದಿಂದ ನಿರೀಕ್ಷಿತ ಪ್ರಮಾಣದ ನೀರು ಸಿಗುತ್ತಿಲ್ಲ. ಊರಿನಲ್ಲಿರುವ ಬಾವಿಗಳ ನೀರು ಬತ್ತಿದೆ. ಇರುವ ಒಂದೆರಡು ಬಾವಿಗಳ ಎದುರು ನೀರು ಸೇದಲು ನಸುಕಿನ ಜಾವದಲ್ಲೇ ಸರದಿ ಶುರುವಾಗುತ್ತದೆ’

ಹೀಗೆ.. ಕಾರವಾರ ತಾಲ್ಲೂಕಿನ ತೊಡೂರಿನ ಸೀಬರ್ಡ್ ಕಾಲೊನಿ ನಿವಾಸಿ ಪೂರ್ಣಿಮಾ ಮಹೇಕರ್ ಅವರು ಸರದಿಯಲ್ಲಿ ಇಟ್ಟಿದ್ದ ಕೊಡದಲ್ಲಿ ನೀರು ತುಂಬಿಸುತ್ತ ಸಮಸ್ಯೆ ವಿವರಿಸಿದರು.

‘ಗ್ರಾಮದ ಬಹುತೇಕ ಜನರು ಕೂಲಿ ಕೆಲಸಕ್ಕೆ ನೌಕಾನೆಲೆಗೆ, ನಗರಕ್ಕೆ ಹೋಗುತ್ತಾರೆ. ನೀರಿನ ಕೊರತೆಯ ಕಾರಣದಿಂದ ದೂರದ ಬಾವಿಗಳಿಂದ ನೀರು ತರಲು ಅರ್ಧ ದಿನವನ್ನೇ ವ್ಯಯಿಸಬೇಕಾದ ಸ್ಥಿತಿ ಇದೆ. ಕೆಲಸಕ್ಕೆ ರಜೆ ಹಾಕುವ ಅನಿವಾರ್ಯತೆ ಎದುರಾಗಿದೆ’ ಎಂದು ವಿವರಿಸಿದರು.

ADVERTISEMENT

‘ಮಾರ್ಚ್ ಆರಂಭದಲ್ಲೇ ಗ್ರಾಮದ ಬಾವಿಗಳು ಬತ್ತಿಹೋಗುತ್ತವೆ. ಜಲಜೀವನ್ ಮಿಷನ್ ಯೋಜನೆಯೂ ಸಾಕಾರಗೊಂಡಿಲ್ಲ. ನೀರಿಗಾಗಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪೂರೈಕೆಗೆ ವ್ಯವಸ್ಥೆ ಆಗಿಲ್ಲ’ ಎಂದು ಬೈರಾ ಗ್ರಾಮಸ್ಥರು ದೂರಿದರು.

ಇದು ಕೇವಲ ಒಂದೆರಡು ಗ್ರಾಮಗಳ ಜನರ ಬವಣೆ ಅಲ್ಲ. ತಾಲ್ಲೂಕಿನ ಅಮದಳ್ಳಿ, ಕಿನ್ನರ, ಕಡವಾಡ, ಕೊಠಾರ, ಹಳಗಾ, ಬೇಳೂರು, ಕಡಿಯೆ ಸೇರಿದಂತೆ ಹತ್ತಾರು ಗ್ರಾಮಗಳು ನೀರಿನ ಕೊರತೆ ಎದುರಿಸುತ್ತಿವೆ. ಕಾಳಿ ನದಿ ಅಂಚಿನಲ್ಲಿನ ಗ್ರಾಮಗಳಲ್ಲೇ ನೀರಿನ ಕೊರತೆಯ ಸಮಸ್ಯೆ ಗಂಭೀರತೆ ತಳೆದಿದೆ.

‘ಅಮದಳ್ಳಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಡೆದ ಕಾಮಗಾರಿ ಸಮರ್ಪಕವಾಗಿಲ್ಲ. ಈ ಕಾರಣದಿಂದ ನೀರು ಪೂರೈಕೆಯೂ ಸರಿಯಾಗಿಲ್ಲ. ಗಂಗಾವಳಿ ನದಿಯಿಂದ ಪ್ರತಿ ಎರಡು ಅಥವಾ ಮೂರು ದಿನಕ್ಕೊಮ್ಮೆ  ನೀರು ಪೂರೈಸಲಾಗುತ್ತಿದೆ’ ಎಂದು ಗ್ರಾಮಸ್ಥ ನರೇಂದ್ರ ತಳೇಕರ್ ದೂರಿದರು.

ಮಳೆಗಾಲದಲ್ಲಿ ಅತಿವೃಷ್ಟಿಯಿಂದ ನಲುಗುವ ಉತ್ತರ ಕನ್ನಡದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆಯೂ ಎದುರಾಗುತ್ತದೆ. ಈಚಿನ ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಕೊರತೆಯ ಸಮಸ್ಯೆ ಹೆಚ್ಚುತ್ತಿರುವುದು ಕಳವಳ ಸೃಷ್ಟಿಸಿದೆ.

ಕಳೆದ ವರ್ಷದ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿತ್ತು. ನದಿಗಳು ಉಕ್ಕೇರಿದ್ದವು, ಹಳ್ಳಕೊಳ್ಳಗಳು ಭರ್ತಿಯಾಗಿ ಹರಿದಿದ್ದವು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದು ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಅದು ಹುಸಿಯಾಗಿದೆ.

ಜಿಲ್ಲೆಯ 229 ಗ್ರಾಮ ಪಂಚಾಯಿತಿಗಳ ಪೈಕಿ 147 ಗ್ರಾಮ ಪಂಚಾಯಿತಿಗಳ 411 ಹಳ್ಳಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 298 ವಾರ್ಡ್‌ಗಳ ಪೈಕಿ 53 ವಾರ್ಡ್‌ಗಳಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂಬುದಾಗಿ ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಘಟಕ ಅಂದಾಜಿಸಿದೆ.

‘ಸದ್ಯ ಮುಂಡಗೋಡ, ಹೊನ್ನಾವರ, ಹಳಿಯಾಳದ 26 ಗ್ರಾಮಗಳಿಗೆ ಸ್ಥಳಿಯವಾಗಿ ಲಭ್ಯವಿರುವ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಂಕಿ–ಅಂಶ

ಕಾರವಾರ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಿಸಬಹುದಾದ ಪ್ರದೇಶಗಳ ಮಾಹಿತಿ

ತಾಲ್ಲೂಕು;ಗ್ರಾಮಗಳ ಸಂಖ್ಯೆ;ನಗರ/ಪಟ್ಟಣದ ವಾರ್ಡ್‍ಗಳು

ಕಾರವಾರ;20;06

ಅಂಕೋಲಾ;50;09

ಭಟ್ಕಳ;32;10

ಹಳಿಯಾಳ;37;00

ಹೊನ್ನಾವರ;55;00

ಕುಮಟಾ;81;08

ಮುಂಡಗೋಡ;19;00

ಸಿದ್ದಾಪುರ;50;05

ಶಿರಸಿ;15;00

ಜೊಯಿಡಾ;45;00

ಯಲ್ಲಾಪುರ;03;01

ದಾಂಡೇಲಿ;04;00

ಕಾರವಾರ ತಾಲ್ಲೂಕಿನ ಹಳಗಾದಲ್ಲಿ ವ್ಯಕ್ತಿಯೊಬ್ಬರು ದೂರದಿಂದ ಸೈಕಲ್‌ ಮೇಲೆ ನೀರು  ನೀರು ತರಲು ಸೈಕಲ್‍ಗೆ ಕೊಡ ಕಟ್ಟಿಕೊಂಡು ಸಾಗುತ್ತಿರುವುದು
ತೊಡೂರು ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಉಪಯೋಗಕ್ಕೆ ಬರುತ್ತಿಲ್ಲ. ಗಂಗಾವಳಿಯಿಂದ ಪೂರೈಕೆಯಾಗುವ ನೀರು ಸರಿಯಾಗಿ ಬರುತ್ತಿಲ್ಲ
-ಪೇರು ಗೌಡ ತೊಡೂರು ಗ್ರಾಮ ಪಂಚಾಯಿತಿ ಸದಸ್ಯ
ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ಅಥವಾ ಸಮೀಪದ ಪರ್ಯಾಯ ಜಲಮೂಲಗಳಿಂದ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
-ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ಸವುಳಾಗುವ ನೀರು

‘ಬೇಸಿಗೆಯಲ್ಲಿ ಕಾಳಿನದಿಯಲ್ಲಿಯೂ ನೀರಿನ ಹರಿವಿನ ಮಟ್ಟ ಕಡಿಮೆಯಾಗುವ ಕಾರಣದಿಂದ ಸಮುದ್ರ ಉಬ್ಬರದ ವೇಳೆ ಉಪ್ಪುನೀರು ನದಿಯ ಅಕ್ಕಪಕ್ಕದ ಗಜನಿಗಳಿಗೆ ನುಗ್ಗುತ್ತದೆ. ಇದರಿಂದ ಸಮೀಪದ ಬಾವಿಗಳ ನೀರು ಸವುಳಾಗಿ ಬಳಕೆಗೆ ಬರದಂತಾಗುತ್ತಿದೆ’ ಎಂದು ದೂರುತ್ತಾರೆ ಕಿನ್ನರದ ಉಲ್ಲಾಸ ನಾಗೇಕರ.

‘ಹಣಕೋಣ ಅಂಬೆವಾಡಾ ಹಳಗೆಜೂಗ್ ಗ್ರಾಮದಲ್ಲಿಯೂ ಈ ಹಿಂದೆ ಇದೇ ಸಮಸ್ಯೆ ಇದ್ದವು. ಖಾರ್‌ಲ್ಯಾಂಡ್ ಒಡ್ಡಿಗೆ ಕಬ್ಬಿಣದ ಗೇಟ್ ಅಳವಡಿಸಿದ್ದರಿಂದ ಈ ಬಾರಿ ಸಮಸ್ಯೆ ತಲೆದೋರಿಲ್ಲ. ಆದರೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿತ ಕಾಣುತ್ತಿದ್ದು ಒಂದೆರಡು ವಾರದಲ್ಲಿ ನೀರಿನ ಕೊರತೆ ಎದುರಾಗಬಹುದು’ ಎಂದು ಗ್ರಾಮಸ್ಥ ಜಗದೀಶ ಗಂಗೆಪುತ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.