ADVERTISEMENT

ನಿರಂತರ ಮಳೆ: ಏಳು ನೂರು ಎಕರೆ ನುಂಗಿದ ‘ವರದಾ’

ಮೊಗಳ್ಳಿ:ಸತತ ಹದಿನೈದು ದಿನದಿಂದ ಮುಳುಗಡೆಯಾಗಿರುವ ಕೃಷಿ ಭೂಮಿ

ಗಣಪತಿ ಹೆಗಡೆ
Published 16 ಜುಲೈ 2022, 19:30 IST
Last Updated 16 ಜುಲೈ 2022, 19:30 IST
ನಿರಂತರ ಮಳೆಯಿಂದ ವರದಾ ನದಿ ಉಕ್ಕೇರಿ ಮೊಗಳ್ಳಿ ಗ್ರಾಮದ ಕೃಷಿ ಭೂಮಿಗಳು ಜಲಾವೃತಗೊಂಡಿದೆ
ನಿರಂತರ ಮಳೆಯಿಂದ ವರದಾ ನದಿ ಉಕ್ಕೇರಿ ಮೊಗಳ್ಳಿ ಗ್ರಾಮದ ಕೃಷಿ ಭೂಮಿಗಳು ಜಲಾವೃತಗೊಂಡಿದೆ   

ಶಿರಸಿ: ಸತತ ಮಳೆಯ ಪರಿಣಾಮ ಹರಿವಿನ ಮಟ್ಟ ಏರಿಸಿಕೊಂಡಿರುವ ವರದಾ ನದಿ ತಾಲ್ಲೂಕಿನ ಭಾಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೊಗಳ್ಳಿ ಗ್ರಾಮವನ್ನು ಜಲ ದಿಗ್ಬಂಧನದಲ್ಲಿ ಇರಿಸಿಕೊಂಡಿದೆ.

ಮೊಗಳ್ಳಿ ಗ್ರಾಮದ ಏಳು ನೂರಕ್ಕೂ ಅಧಿಕ ಎಕರೆ ಕೃಷಿ ಭೂಮಿ ನದಿ ಪ್ರವಾಹಕ್ಕೆ ಸಿಲುಕಿದೆ. ಜು.1 ರಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ವ್ಯಾಪಕ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ಭತ್ತ, ಮೆಕ್ಕೆಜೋಳ, ಅನಾನಸ್, ಬಾಳೆ, ಅಡಿಕೆ ಗಿಡಗಳಿದ್ದ ಸುಮಾರು ಏಳುನೂರಕ್ಕೂ ಅಧಿಕ ವಿಸ್ತೀರ್ಣದ ಕೃಷಿಭೂಮಿ ನೀರುಪಾಲಾಗಿದೆ.

ಭಾಶಿ ಗ್ರಾಮದಿಂದ ಮೊಗಳ್ಳಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಸಿರಿನಿಂದ ನಳನಳಿಸಿದ್ದ ಗದ್ದೆಗಳ ಜಾಗದಲ್ಲಿ ಈಗ ನೀರಿನ ಅಲೆಗಳ ಅಬ್ಬರ ಕಾಣಸಿಗುತ್ತಿದೆ. ನೆರೆಯ ಸಾಗರ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗದ ಪರಿಣಾಮ ನದಿ ರಭಸ ಇಳಿಯುತ್ತಿಲ್ಲ.

ADVERTISEMENT

80ಕ್ಕೂ ಹೆಚ್ಚು ಮನೆಗಳಿರುವ ಮೊಗಳ್ಳಿ ಗ್ರಾಮಕ್ಕೆ ಪ್ರವಾಹ ಹೊಸತಲ್ಲ. ಪ್ರತಿ ಬಾರಿ ಮಳೆ ಪ್ರಮಾಣ ಹೆಚ್ಚಿದಾಗ ಉಕ್ಕೇರುವ ವರದಾ ನದಿ ಗದ್ದೆಗಳನ್ನು ವಾರಗಟ್ಟಲೆ ಮುಳುಗಿಸುತ್ತಿತ್ತು. ಇದರಿಂದ ಫಲವತ್ತತೆಯೂ ಹೆಚ್ಚುತ್ತದೆ ಎಂದು ರೈತರು ನಂಬಿದ್ದಾರೆ.

ಆದರೆ, ಈ ಬಾರಿ ಎರಡು ವಾರ ಕಳೆದರೂ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿಲ್ಲ. ಇದರಿಂದಾಗಿ ಗದ್ದೆಯಲ್ಲಿ ಭತ್ತ, ಜೋಳ ಬಿತ್ತನೆ ಮಾಡಿ, ಗೊಬ್ಬರ, ಔಷಧಕ್ಕೆ ಸಾವಿರಾರು ರೂಪಾಯಿ ವೆಚ್ಚ ಭರಿಸಿದ್ದ ರೈತರಿಗೆ ಚಿಂತೆಯಾಗಿದೆ. ಪ್ರತಿನಿತ್ಯ ಗ್ರಾಮದ ಹತ್ತಾರು ರೈತರು ದೂರದಿಂದ ಜಲಾವೃತವಾದ ಗದ್ದೆ ನೋಡಿ ಬೇಸರದೊಂದಿಗೆ ಮನೆಗೆ ಮರಳುತ್ತಿದ್ದಾರೆ.

‘ಮಳೆಗಾಲದಲ್ಲಿ ವರದಾ ನದಿ ಭರ್ತಿಯಾಗಿ ಗದ್ದೆಗೆ ನುಗ್ಗುವುದು ಸಾಮಾನ್ಯವಾಗಿತ್ತು. ಕಳೆದ ಬಾರಿಯೂ ಪ್ರವಾಹ ಎದುರಿಸಿದ್ದೆವು. ಈ ಬಾರಿ ಅರ್ಧ ತಿಂಗಳಾದರೂ ಪ್ರವಾಹ ಇಳಿಕೆಯಾಗದಿರುವುದು ಆತಂಕ ತಂದಿದೆ. ಮೊಳಕೆಯೊಡೆದಿದ್ದ ಸಸಿಗಳು ದೀರ್ಘ ಅವಧಿಗೆ ನೀರು ನಿಂತ ಪರಿಣಾಮ ಹಾಳಾಗಲಿವೆ’ ಎಂದು ರೈತ ಪ್ರಕಾಶ್ ಬೇಸರ ತೋಡಿಕೊಂಡರು.

ಹತ್ತು ದಿನಕ್ಕಿಂತ ಹೆಚ್ಚಿದ್ದರೆ ಹಾನಿ:

‘ಭತ್ತ, ಜೋಳ ಬಿತ್ತನೆ ಮಾಡಿರುವ ಗದ್ದೆಯಲ್ಲಿ ನದಿನೀರು ಹತ್ತು ದಿನಗಳವರೆಗೆ ನಿಂತಿದ್ದರೂ ಸಮಸ್ಯೆ ಉಂಟಾಗದು. ಆದರೆ ಅದಕ್ಕಿಂತ ಹೆಚ್ಚು ದಿನ ಜಲಾವೃತವಾಗಿದ್ದರೆ ಸಸಿಗಳು ಕೊಳೆತು ಹಾಳಾಗುತ್ತವೆ. ಮೊಗಳ್ಳಿಯಲ್ಲಿ ನೆರೆ ಇಳಿಕೆಯಾದ ಕೂಡಲೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮವಹಿಸುತ್ತೇವೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ.

‘ಭಾಶಿ ಗ್ರಾಮದ ಹತ್ತಾರು ಎಕರೆ ಅಡಿಕೆ ತೋಟದಲ್ಲಿಯೂ ಅಡಿಗಳಷ್ಟು ಎತ್ತರಕ್ಕೆ ನೀರು ನಿಂತಿದೆ. ನಿರಂತರವಾಗಿ ನೀರು ನಿಂತಿದ್ದರೆ ಮರದ ಬೇರುಗಳಿಗೆ ಪೋಷಕಾಂಶ ಹೀರಲು ಸಾಧ್ಯವಾಗದು. ಅದರಿಂದ ಅಡಿಕೆಗೆ ಕೊಳೆರೋಗ ಆವರಿಸಿಕೊಳ್ಳಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ ಹೇಳಿದರು.

–––––––––––––

ಅಂಕಿ–ಅಂಶ

190 ಹೆಕ್ಟೇರ್:ಭತ್ತ ಬಿತ್ತನೆ ಮಾಡಿದ ಪ್ರದೇಶ

88 ಹೆಕ್ಟೇರ್: ಅನಾನಸ್, ಅಡಿಕೆ ಬೆಳೆದ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.