ಕಾರವಾರ: ‘ವೇದಾಧ್ಯಯನ ಪರಂಪರೆ ಬೆಳೆಯಬೇಕು. ಭವಿಷ್ಯದಲ್ಲಿ ವೈದಿಕ ವರ್ಗಕ್ಕೆ ದೊಡ್ಡ ಮಹತ್ವ ಸಿಗಲಿದೆ’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಶುಕ್ರವಾರ ಆಶೀರ್ವಚನ ನೀಡಿದರು.
‘ಸಮಾಜ ಗುರುಕುಲದ ಮಹತ್ವ ಅರಿತು ಅಧ್ಯಯನಾರ್ಥವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು. ಅಗ್ನಿಹೋತ್ರ, ಶ್ರೌತಯಜ್ಞಗಳ ಗತವೈಭವ ಅಶೋಕೆಯಲ್ಲಿ ಮರುಕಳಿಸಬೇಕು’ ಎಂದರು.
‘ಹವ್ಯಕ ಪರಂಪರೆ ಕ್ಷೀಣಿಸಬಾರದು ಎಂದಾದರೆ ಸಮಾಜ ಬಾಂಧವರು ಕುಲವೃದ್ಧಿಗೆ ಶ್ರಮಿಸಬೇಕು. ಮಕ್ಕಳನ್ನು ಪಡೆದುಕೊಳ್ಳಲು ನಾಚಿಕೆ ಪಡಬೇಕಿಲ್ಲ. ಮಕ್ಕಳು ಭವಿಷ್ಯದ ಸಂಪತ್ತು’ ಎಂದು ತಿಳಿಸಿದರು.
‘ಚಾತುರ್ಮಾಸ್ಯ ನಿರೀಕ್ಷೆಗೂ ಮೀರಿ ಉತ್ತಮವಾಗಿ ಮುಕ್ತಾಯಗೊಳ್ಳುತ್ತಿದೆ ಎನ್ನುವುದು ಸಮಾಧಾನ ತಂದಿದೆ. ಇದು ಬದುಕಿನ ಪ್ರತೀಕ. ಜೀವನ, ಬದುಕು ಮುಗಿಯುವ ವ್ಯಥೆಗಿಂತ ಬದುಕು ಚೆನ್ನಾಗಿ ಆಗಿದೆ ಎಂಬ ಸಮಾಧಾನಪಟ್ಟುಕೊಳ್ಳಬೇಕು. ಜೀವನದಲ್ಲಿ ಹಿಂದೆ ತಿರುಗಿ ನೋಡಿದಾಗ ಸಮಾಧಾನವಾಗುವಂತೆ ಬಾಳ್ವೆ ನಡೆಸಬೇಕು’ ಎಂದರು.
ಘನಪಾರಾಯಣದ ಕುರಿತು ಸುಚೇತನ ಘನಪಾಠಿ ವಿವರಿಸಿದರು. ಶ್ರೀಕಾಂತ ಪಂಡಿತ್, ವಿನಾಯಕ ಹೆಗಡೆಕಟ್ಟಾ, ಜಿ.ಎಲ್.ಹೆಗಡೆ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್, ಧಾರವಾಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಅಕ್ಕಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಮಹೇಶ್ ಚಟ್ನಳ್ಳಿ, ಟಿ.ಜೆ.ಪ್ರಸನ್ನಕುಮಾರ್, ಜಿ.ಕೆ.ಹೆಗಡೆ, ಎಂ.ಎನ್.ಮಹೇಶ ಹೆಗಡೆ, ಅರವಿಂದ ಧರ್ಬೆ, ರಾಘವೇಂದ್ರ, ಅಜಿತ್ ಗುಡಿಗೆ, ನಿಖಿಲ ಹೆಗಡೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.