ಕಾರವಾರ: ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದ್ದು ಕನಿಷ್ಠ ತಾಪಮಾನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಸಹವಾಗಿ ಶೀತ, ನೆಗಡಿ ಲಕ್ಷಣಗಳು ಹೆಚ್ಚುತ್ತಿದೆ. ಇದರಿಂದ ಕೋವಿಡ್ ಮಾದರಿಯಲ್ಲೇ ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‍ಎಂಪಿವಿ) ಹರಡಬಹುದು ಎಂಬ ವದಂತಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ಆದರೆ, ಎಚ್‍ಎಂಪಿವಿ ಅಪಾಯಕಾರಿಯಲ್ಲ. ಎರಡು ದಶಕದ ಹಿಂದೆಯೇ ಇಲ್ಲಿ ಪತ್ತೆಯಾದ ವೈರಸ್ ಆಗಿದ್ದು, ಕೋವಿಡ್ ವೈರಾಣುವಿನಂತೆ ಗಂಭೀರ ಸಮಸ್ಯೆ ತಂದೊಡ್ಡದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
‘ಎಚ್‍ಎಂಪಿವಿ ಹರಡದಂತೆ ನಿಗಾ ಇಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹರಡುವ ಶೀತ, ನೆಗಡಿ, ಕೆಮ್ಮು ರೋಗದ ಲಕ್ಷಣಗಳಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಮೂರು ದಿನಕ್ಕಿಂತ ಹೆಚ್ಚು ಅಧಿಕ ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದರೆ ಮಾತ್ರ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಟ್ಟು, ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಒಂದೆಡೆಯಾದರೆ, ಈ ಹಿಂದಿನ ವರ್ಷಗಳ ಚಳಿಯ ವಾತಾವರಣಕ್ಕಿಂತ ಉಷ್ಣಾಂಶ ಮತ್ತಷ್ಟು ಕುಸಿದಿದೆ. ಕರಾವಳಿ ಭಾಗದಲ್ಲಿಯೂ ಮೈನಡುಗಿಸುವ ಚಳಿಯ ವಾತಾವರಣ ಉಂಟಾಗಿದ್ದು, ಮಲೆನಾಡು ಭಾಗದಲ್ಲಿ ಚಳಿಯ ಪ್ರಖರತೆ ಹೆಚ್ಚಿದೆ. ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‍ಗೆ ಇಳಿಕೆಯಾಗಿದ್ದರೆ, ಶಿರಸಿ ಸೇರಿದಂತೆ ಹಲವೆಡೆ 15 ಡಿಗ್ರಿ ಸೆಲ್ಸಿಯಸ್‍ನಷ್ಟಿದೆ ಎಂಬುದಾಗಿ ಹವಾಮಾನ ಇಲಾಖೆ ಅಂದಾಜಿಸಿದೆ.
ನಸುಕಿನ ಜಾವದಲ್ಲೇ ಮೀನುಗಾರಿಕೆಗೆ ತೆರಳುವವರು, ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು, ಸಂಸ್ಕರಣೆ, ಕಬ್ಬು ಕಟಾವು ಪ್ರಕ್ರಿಯೆಯಲ್ಲಿ ತೊಡಗಿರುವವರು ಚಳಿಯ ಕಾರಣದಿಂದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ. ನಸುಕಿನ ಜಾವ ನಗರದ ರಸ್ತೆಗಳಲ್ಲಿ ಗುಂಪುಗುಂಪಾಗಿ ಕಾಣಸಿಗುತ್ತಿದ್ದ ವಾಯುವಿಹಾರಿಗರ ಸಂಖ್ಯೆ ಇಳಿಕೆಯಾಗಿದೆ.
**
ಚಳಿಯ ವಾತಾವರಣದಿಂದ ಆರೋಗ್ಯದಲ್ಲಿ ಏರುಪೇರು ಸಹಜ. ಎಚ್ಎಂಪಿವಿ ವೈರಸ್ ಬಗ್ಗೆ ಜನರಲ್ಲಿ ಯಾವುದೇ ಆತಂಕ ಬೇಡ
–ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
ಪ್ರತಿ ಆಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲು
‘ಎಚ್‍ಎಂಪಿವಿ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ತಲಾ 10 ಹಾಸಿಗೆಯನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಅತಿಯಾದ ಕೆಮ್ಮು ಉಸಿರಾಟ ಸಮಸ್ಯೆ ಇದ್ದವರು ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕು. ಕೋವಿಡ್ ತಪಾಸಣೆ ಮಾದರಿಯಲ್ಲೇ ಪರೀಕ್ಷೆ ನಡೆಸಿ ಸೋಂಕು ಇದ್ದರೆ ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ಅಗತ್ಯವಿರುವ ಒಸೆಲ್ಟಿಮಿವಿರ್ ಮಾತ್ರೆಗಳು ಇನ್ನಿತರ ಔಷಧಗಳನ್ನು ದಾಸ್ತಾನು ಇಟ್ಟುಕೊಂಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಚಳಿಯ ವಾತಾವರಣ ಬಿರುಸಾಗಿರುವ ಕಾರಣ ಬಿಸಿಯಾದ ಆಹಾರ ಬಿಸಿನೀರು ಸೇವನೆ ಮಾಡಬೇಕು. ಬೆಚ್ಚನೆಯ ಉಡುಪು ಧರಿಸಿರಬೇಕು. ಬೆಳಗಿನ ಜಾವ ತಡರಾತ್ರಿ ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು. ಕೈಗಳನ್ನು ಸೋಪಿನಿಂದ ತೊಳೆಯುತ್ತಿರಬೇಕು. ಕೆಮ್ಮುವಾಗ ಸೀನುವಾಗ ಮುಖಕ್ಕೆ ಕೈ ಅಡ್ಡ ಇಟ್ಟುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುರಕ್ಷಿತ’ ಎಂದೂ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.