ADVERTISEMENT

ಸೇತುವೆ ಸಂಪರ್ಕಕ್ಕೆ ಏಣಿ ನಿರ್ಮಿಸಿಕೊಂಡ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 14:07 IST
Last Updated 22 ಜೂನ್ 2021, 14:07 IST
ಅಘನಾಶಿನಿ ಸೇತುವೆ ಸಂಪರ್ಕಕ್ಕೆ ಕುಮಟಾ ತಾಲ್ಲೂಕಿನ ಬೊಗರಿಬೈಲ ನಾಗರಿಕರು ಏಣಿ ನಿರ್ಮಿಸಿಕೊಂಡಿರುವುದು
ಅಘನಾಶಿನಿ ಸೇತುವೆ ಸಂಪರ್ಕಕ್ಕೆ ಕುಮಟಾ ತಾಲ್ಲೂಕಿನ ಬೊಗರಿಬೈಲ ನಾಗರಿಕರು ಏಣಿ ನಿರ್ಮಿಸಿಕೊಂಡಿರುವುದು   

ಕುಮಟಾ: ತಾಲ್ಲೂಕಿನ ಬೊಗರಿಬೈಲದಲ್ಲಿ ಅಘನಾಶಿನಿ ನದಿ ಸೇತುವೆಯ ಎರಡೂ ಬದಿ ಸಂಪರ್ಕಕ್ಕೆ ಸ್ಥಳೀಯರೇ ಅಡಿಕೆ ಮರ, ಕಟ್ಟಿಗೆ ಕಂಬ ಬಳಸಿ, ಶ್ರಮದಾನದ ಮೂಲಕ ಏಣಿ ನಿರ್ಮಿಸಿಕೊಂಡಿದ್ದಾರೆ. ಸೇತುವೆ ಮೇಲೆ ಓಡಾಡಲು ಅನುಕೂಲ ಕಲ್ಪಿಸಿಕೊಂಡಿದ್ದಾರೆ.

ಬೊಗರಿಬೈಲ– ಉಪ್ಪಿನಪಟ್ಟಣ ಧಕ್ಕೆ ನಡುವೆ ಸುಮಾರು ₹ 17 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಎರಡೂ ಬದಿಗೆ ರಸ್ತೆ ಸಂಪರ್ಕಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ. ಬ್ರಿಟಿಷರ ಕಾಲದಲ್ಲಿ ಎತ್ತಿನಗಾಡಿ ಓಡಾಡಿದ ಹೊನ್ನಾವರ– ಕತಗಾಲ ರಸ್ತೆಯನ್ನು ಈ ಸೇತುವೆ ಸಂಪಕಿಸುತ್ತದೆ. ಎರಡೂ ಕಡೆ ಮೂರು ಗ್ರಾಮ ಪಂಚಾಯ್ತಿಗಳ ಹತ್ತಾರು ಊರುಗಳ ಸಂಪರ್ಕಕ್ಕೆ ಅತಿ ಸಮೀಪದ ಮಾರ್ಗ ಇದಾಗಿದೆ.

‘ಸೇತುವೆ ನಿರ್ಮಾಣಕ್ಕೆ ಮೊದಲು ನದಿಯ ಎರಡೂ ಕಡೆ ಜನರ ಓಡಾಟಕ್ಕೆ ದೋಣಿಗಳ ಬಳಕೆ ಇತ್ತು. ಬೇರೆ ಬೇರೆ ಊರಿನ ಜನ ಇಲ್ಲಿ ದೋಣಿ ಬಳಸುತ್ತಿದ್ದರು. ಎರಡು ವರ್ಷಗಳಿಂದ ದೋಣಿ ಹಾಳಾಗಿದೆ. ಹಾಳಾದ ದೋಣಿಯಲ್ಲಿ ಮಳೆಗಾಲದ ಪ್ರವಾಹದಲ್ಲಿ ನದಿ ದಾಟುವುದು ಅಪಾಯಕಾರಿ. ಹಾಗಾಗಿ ಗ್ರಾಮಸ್ಥರು ಸೇರಿ ಎರಡು ದಿವಸ ಶ್ರಮದಾನ ಮಾಡಿದರು. ಸೇತುವೆ ಹತ್ತಲು ಎರಡೂ ಕಡೆ ಸುರಕ್ಷಿತವಾಗಿ ಏಣಿ ನಿರ್ಮಿಸಿಕೊಂಡಿದ್ದೇವೆ. ಈ ವಿಷಯ ತಿಳಿದ ಶಾಸಕ ದಿನಕರ ಶೆಟ್ಟಿ, ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಗ್ರಾಮಸ್ಥ ಜಗದೀಶ ನಾಯ್ಕ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.