ADVERTISEMENT

ಕೆರೆಯ ಗೇಟು ದುರಸ್ತಿ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

ಅರ್ಥಲಾವ ಕೆರೆ ಅಪೂರ್ಣ ಕಾಮಗಾರಿ: ರೈತರಿಗೆ ತೊಂದರೆ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2022, 13:41 IST
Last Updated 9 ಮೇ 2022, 13:41 IST
ಕಾರವಾರ ತಾಲ್ಲೂಕಿನ ಅರ್ಥಲಾವ ಕೆರೆಯ ಗೇಟುಗಳನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು ಮುಡಗೇರಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಕಾರವಾರ ತಾಲ್ಲೂಕಿನ ಅರ್ಥಲಾವ ಕೆರೆಯ ಗೇಟುಗಳನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು ಮುಡಗೇರಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಕಾರವಾರ: ತಾಲ್ಲೂಕಿನ ಮುಡಗೇರಿ ಗ್ರಾಮದ ಅರ್ಥಲಾವ ಕೆರೆಯ ಗೇಟಿನ ದುರಸ್ತಿ ಕಾರ್ಯವು ಅವಧಿ ಮುಗಿದರೂ ‍ಪೂರ್ಣಗೊಂಡಿಲ್ಲ. ಇದರಿಂದ ಜಲಾನಯದ ಪ್ರದೇಶದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಿಲ್ಲ. ಈ ಆರ್ಥಿಕ ಹಾನಿಗೆ ಗುತ್ತಿಗೆದಾರೇ ಹೊಣೆಗಾರರು ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಸೇರಿದ ಗ್ರಾಮಸ್ಥರು, ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮದ ಪ್ರಮುಖ ನಂದಕಿಶೋರ ನಾಯ್ಕ ಮಾತನಾಡಿ, ‘ಕೆರೆಯ ಕಾಲುವೆಯನ್ನು ದುರಸ್ತಿ ಮಾಡಿಲ್ಲ. ಹೂಳನ್ನು ಸರಿಯಾಗಿ ತೆಗೆದಿಲ್ಲ. ಗುತ್ತಿಗೆದಾರ ಮಾಧವ ನಾಯಕ ಅವರಿಗೆ ಕಾಮಗಾರಿಯನ್ನು 2020ರ ಸೆ.11ರಂದು ಹಸ್ತಾಂತರಿಸಲಾಗಿತ್ತು. ಪೂರ್ಣಗೊಳಿಸಲು ಒಂಬತ್ತು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಅಪೂರ್ಣ ಕಾಮಗಾರಿಯಿಂದ ರೈತರಿಗೆ ಕಾರಗದ್ದೆ (ಬೇಸಿಗೆ ಬೆಳೆ) ಬೇಸಾಯ ಸಾಧ್ಯವಾಗಲಿಲ್ಲ’ ಎಂದು ದೂರಿದರು.

ADVERTISEMENT

‘ಈವರೆಗೆ ಕೈಗೊಂಡಿರುವ ಕಾಮಗಾರಿಯು ಕಳಪೆಯಾಗಿದ್ದು, ತನಿಖೆಗೆ ಒಳಪಡಿಸುವ ಅವಶ್ಯಕತೆಯಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀಮಾ ಗೋಕುಲದಾಸ ನಾಯ್ಕ ಮಾತನಾಡಿ, ‘ಕೆರೆಯ ದುರಸ್ತಿ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಮುಂದಾಗುವ ಎಲ್ಲ ಪರಿಣಾಮಗಳಿಗೆ ಸಂಬಂಧಿತ ಅಧಿಕಾರಿಗಳು, ಗುತ್ತಿಗೆದಾರರೇ ಜವಾಬ್ದಾರರಾಗುತ್ತಾರೆ’ ಎಂದು ಹೇಳಿದರು.

ಗ್ರಾಮದ ಹಿರಿಯ ನಾಗರಿಕ ಮಾರುತಿ ನಾಯ್ಕ ಮಾತನಾಡಿ, ‘ಕೆರೆ ನಿರ್ವಹಣೆಯಾಗುತ್ತಿಲ್ಲ. ಯಾರು ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂಬುದೇ ಗ್ರಾಮಸ್ಥರಿಗೆ ಮಾಹಿತಿಯಿಲ್ಲ. ಮುಂದಿನ ಬೇಸಿಗೆಯಲ್ಲಿ ಕೆರೆಯ ತುಂಬ ನೀರು ಸಂಗ್ರಹವಿರಬೇಕು. ಹಾಗಾಗಿ ಅದರಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಿ‌’ ಎಂದು ಒತ್ತಾಯಿಸಿದರು.

‘ಮಳೆಗಾಲಕ್ಕೂ ಮೊದಲು ದುರಸ್ತಿ’:

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ವಿನೋದ ನಾಯ್ಕ ಗ್ರಾಮಸ್ಥರೊಂದಿಗೆ ಮಾತನಾಡಿದರು.

‘ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಿ 1 ವರ್ಷ 9 ತಿಂಗಳಾದವು. ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಕೆಲಸ ನಿಧಾನವಾಗಿದೆ. ಗುತ್ತಿಗೆದಾರರಿಂದಲೂ ಸ್ವಲ್ಪ ತಪ್ಪಾಗಿದೆ. ಮಳೆಗಾಲಕ್ಕೂ ಮೊದಲು ಎರಡು ಗೇಟ್‌ಗಳನ್ನು ದುರಸ್ತಿ ಮಾಡಿಸುವುದು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ ಕೋಯರ್ ನಾಯ್ಕ, ಪ್ರಮುಖರಾದ ಸುರೇಂದ್ರ ಗಾಂವ್ಕರ್, ರಾಮದಾಸ್ ಕಾಂಬಳೆ, ಆರತಿ ಬಾನಾವಳಿ, ಅರುಣ್ ಗುರವ್, ರಾಜು ಬಾನಾವಳಿ, ರುಝಾರ್, ಬಸ್ತ್ಯಾಂವ್ ಇದ್ದರು.

ವಿಶಾಲವಾದ ಕೆರೆ:

80ರ ದಶಕದಲ್ಲಿ ನಿರ್ಮಿಸಲಾದಅರ್ಥಲಾವ ಕೆರೆಯು, ಸುಮಾರು 1,800 ಎಕರೆ ಜಲಾನಯನ ಪ್ರದೇಶವನ್ನು ಹೊಂದಿದೆ. ಆರಂಭದಲ್ಲಿ ಏಳು ಎಕರೆ ವಿಸ್ತೀರ್ಣದಲ್ಲಿದ್ದ ಕೆರೆಯನ್ನು ಡೆನ್ಮಾರ್ಕ್ ದೇಶದ ಧನ ಸಹಾಯದಿಂದ ಅಭಿವೃದ್ಧಿ ಪಡಿಸಲಾಯಿತು. ಪ್ರಸ್ತುತ ಸುಮಾರು 80 ಎಕರೆಯಲ್ಲಿದ್ದು, 200 ಎಕರೆಗಳಷ್ಟು ವ್ಯಾಪ್ತಿಯಲ್ಲಿ ನೀರಿನ ಸಂಗ್ರಹವಾಗುತ್ತದೆ. ಮುಡಗೇರಿ, ಅರವ್ ಹಾಗೂ ಕೊಳಗೆ ಗ್ರಾಮಗಳಿಗೆ ಇಲ್ಲಿಂದ ನೀರಾವರಿ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ ಎಂದು ಗ್ರಾಮದ ಹಿರಿಯ ಬಿಕಾಜಿ ಗಾಂವ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.