ADVERTISEMENT

ಮೇದಿನಿಯಲ್ಲಿ ಜಿಲ್ಲಾಧಿಕಾರಿಗೆ ಸಾಲು ಸಾಲು ಅಹವಾಲು

ಕುಮಟಾ: ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 15:26 IST
Last Updated 19 ಮಾರ್ಚ್ 2022, 15:26 IST
ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜನರಿದ್ದಲ್ಲಿಗೇ ತೆರಳಿ ಅಹವಾಲು ಆಲಿಸಿದರು
ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜನರಿದ್ದಲ್ಲಿಗೇ ತೆರಳಿ ಅಹವಾಲು ಆಲಿಸಿದರು   

ಕಾರವಾರ/ ಕುಮಟಾ: ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ ಶನಿವಾರ ವಿಶೇಷ ಗಡಿಬಿಡಿಯಿತ್ತು. ಮೂಲಸೌಲಭ್ಯ ವಂಚಿತ ಊರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ವಿವಿಧ ಅಧಿಕಾರಿಗಳಿಗೆ ಗ್ರಾಮಸ್ಥರು ಅಹವಾಲು ವಿವರಿಸಿದರು. ವಿವಿಧ ಬೇಡಿಕೆಗಳ ಒಟ್ಟು 51 ಅರ್ಜಿಗಳನ್ನು ಸಲ್ಲಿಸಿದರು.

ಎರಡು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಹರೀಶಕುಮಾರ್ ಈ ಗ್ರಾಮಕ್ಕೆ ತೆರಳಿ ಸಮಸ್ಯೆ ಆಲಿಸಿದ್ದರು. ಬಳಿಕ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತ್ತಾದರೂ ಗ್ರಾಮದ ರಸ್ತೆ ಸೇರಿದಂತೆ ವಿವಿಧ ಬೇಡಿಕೆಗಳು ಜೀವಂತವಾಗಿದ್ದವು. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಅಭಿಯಾನ ಅಡಿಯಲ್ಲಿ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅದೇ ಗ್ರಾಮದಲ್ಲಿ ಒಂದು ದಿನ ಪೂರ್ತಿ ಉಳಿದರು. ಗ್ರಾಮಸ್ಥರ ದೂರು ದುಮ್ಮಾನಗಳನ್ನು ಆಲಿಸಿದರು.

‘ಊರಿಗೆ ವರ್ಷದಲ್ಲಿ ಮೂರು ತಿಂಗಳು ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ. ಕುಡಿಯುವ ನೀರಿನ ಸಂಪರ್ಕವಿಲ್ಲ. ಅಂಗನವಾಡಿ ಹಾಗೂ ಶಿಥಿಲವಾಗಿರುವ ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕು. ಪ್ರಮುಖವಾಗಿ ಗ್ರಾಮಕ್ಕೆ ಸರ್ವಋತು ರಸ್ತೆ ಬೇಕು. ಈ ಹಿಂದೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾಗಲೂ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಸಮಸ್ಯೆ ವಿವರಿಸಿದರು.

ADVERTISEMENT

ಪಡಿತರ ಚೀಟಿ, ಪಿಂಚಣಿ, ಅಂಗವಿಕಲರಿಗೆ ಮಾಸಾಶನ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಮಾರ್ಗದ ದುರಸ್ತಿ, ಕುಡಿಯುವ ನೀರು, ಶಾಲೆಗೆ ಕಟ್ಟಡ ಮಂಜೂರು ಮಾಡುವ ಭರವಸೆ ನೀಡಿದರು. ಗ್ರಾಮದ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಮರದ ನೆರಳು:

ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಇರುವ ಮೇದಿನಿಯಲ್ಲಿ, ಬೃಹತ್ ಮರದ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜನರ ಬಳಿ ತೆರಳಿ ಪ್ರತಿಯೊಬ್ಬರ ಅಹವಾಲು ಸ್ವೀಕರಿಸಿದರು. ಬಳಿಕ ಗ್ರಾಮದ ಯುವಕರ ಬೈಕ್ ಏರಿ, ಮನೆಗಳಿಗೆ ಹೋಗಿ ಅಲ್ಲಿನ ನಿವಾಸಿಗಳ ಸಮಸ್ಯೆಯನ್ನು ಆಲಿಸಿದರು.

‘ಹಾಸ್ಟೆಲ್: ಸಚಿವರೊಂದಿಗೆ ಚರ್ಚೆ’:

ಮೇದಿನಿ ಗ್ರಾಮದ‌ ಬೆಟ್ಟದ ಕೆಳಗಿನ ಮೊರಸೆ ಗ್ರಾಮದಲ್ಲಿ ಉಳಿದುಕೊಂಡು ಕಾಲೇಜಿಗೆ‌ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ‌ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಅವರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮೇದಿನಿಯಿಂದ ವಾಪಸ್ ಬರುವಾಗ, ರಸ್ತೆ ವಂಚಿತ ಹಾಗೂ ಅಘನಾಶಿನಿ‌ ನದಿಯ ಪ್ರವಾಹ ಪೀಡಿತ ಗ್ರಾಮಗಳಾದ ಬಂಗಣೆ, ಮೊರಸೆಗೆ ಭೇಟಿ ನೀಡಿದರು. ಸ್ಥಳೀಯರು ಕುಮಟಾ– ಶಿರಸಿ– ಸಿದ್ದಾಪುರ ತಾಲ್ಲೂಕು ಸಂಪರ್ಕಿಸುವ ಸಮೀಪದ ನಿಲ್ಕುಂದ ರಸ್ತೆ ಅಭಿವೃದ್ಧಿಗೆ ಮನವಿ‌ ನೀಡಿದರು.

ಸಂತೆಗುಳಿ ಗ್ರಾಮದ ಹಿಂದುಳಿದ ವರ್ಗಗಳ ‌ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದರು.

ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ, ತಹಸೀಲ್ದಾರ್ ವಿವೇಕ ಶೇಣ್ವಿ, ಅಧಿಕಾರಿಗಳಾದ ಗಣೇಶ ಪಟಗಾರ, ರಾಜೇಶ ಮಡಿವಾಳ, ರೇಖಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.