ADVERTISEMENT

ಘೋಷವಾಕ್ಯಕ್ಕೆ ವಿದ್ಯಾರ್ಥಿಗಳಿಂದ ಅಕ್ಷರ ರೂಪ

ಮತದಾನ ಜಾಗೃತಿಗೆ ವಿಭಿನ್ನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:09 IST
Last Updated 25 ಜನವರಿ 2019, 13:09 IST
ಶಿರಸಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮತದಾರರು ಪ್ರತಿಜ್ಞಾವಿಧಿ ಬೋಧಿಸಿದರು
ಶಿರಸಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮತದಾರರು ಪ್ರತಿಜ್ಞಾವಿಧಿ ಬೋಧಿಸಿದರು   

ಶಿರಸಿ: ಯುವ ಮತದಾರರಿಂದ ಮತದಾನ ಜಾಗೃತಿ ಕುರಿತ ಘೋಷಣೆಗಳಿಗೆ ಅಕ್ಷರ ರೂಪ, ಕಡ್ಡಾಯ ಮತ್ತು ನ್ಯಾಯ ಸಮ್ಮತ ಮತದಾನದಲ್ಲಿ ಪಾಲ್ಗೊಳ್ಳುವಿಕೆ, ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಣೆಯೊಂದಿಗೆ ಶುಕ್ರವಾರ ಇಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.

ವಾಣಿಜ್ಯ ಕಾಲೇಜಿನ ಎದುರು, ರಸ್ತೆ ಬದಿಯ ತೆರೆದ ಜಾಗದಲ್ಲಿ ಎತ್ತರದ ಬೋರ್ಡಿಗೆ ಅಂಟಿಸಿದ್ದ ಬಿಳಿ ಹಾಳೆಯ ಮೇಲೆ ಯುವ ಮತದಾರರು ಆಕರ್ಷಕ ಘೋಷ ವಾಕ್ಯ ಬರೆದರು. ಕ್ರಿಯಾಶೀಲ ಘೋಷಣೆ ಬರೆಯುವಲ್ಲಿ ಯುವ ಜನರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಾಲೇಜು ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ತಿಳಿಸಲು, ತಾಲ್ಲೂಕು ಆಡಳಿತ ಇಂತಹ ವಿಭಿನ್ನ ಕಾರ್ಯಕ್ರಮವೊಂದನ್ನು ರೂಪಿಸಿತ್ತು.

ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿದ, ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಅವರು, ‘ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷ ಮಹತ್ವವಿದೆ. ಗ್ರಾಮೀಣ ಭಾಗದವರು ಉತ್ಸಾಹದಿಂದ ಮತದಾನ ಮಾಡಿದರೆ, ನಗರವಾಸಿಗಳು ಈ ಪ್ರಕ್ರಿಯೆಯಿಂದ ಹಿಂದುಳಿದಿದ್ದಾರೆ. ಸದೃಢ ಹಾಗೂ ಸಶಕ್ತ ದೇಶ ನಿರ್ಮಾಣದಲ್ಲಿ ಮತದಾನ ಪ್ರಕ್ರಿಯೆ ಉತ್ತಮವಾಗಿ ನಡೆಯಬೇಕು. ನಾಗರಿಕರು ಮತದಾನದ ಹಕ್ಕನ್ನು ಚಲಾಯಿಸಬೇಕು. ಮತದ ಹಕ್ಕನ್ನು ಯಾವುದೇ ಆಮಿಷಕ್ಕೆ ಒಳಗಾಗಿ ಮಾರಾಟ ಮಾಡಬಾರದು. ಯಾವ ಭಿಕ್ಷೆಗೂ ಮತ ಮಾರಾಟವಾಗಬಾರದು’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮಾತನಾಡಿ, ‘ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತದಾನದಲ್ಲಿ ಭಾಗವಹಿಸಬೇಕು. ವ್ಯವಸ್ಥೆಯ ಭಾಗವಾಗಿದ್ದಾಗ ಮಾತ್ರ ಅದನ್ನು ಟೀಕಿಸುವ ಹಕ್ಕು ಬರುತ್ತದೆ. ಭಾರತದ ಚುನಾವಣಾ ವ್ಯವಸ್ಥೆ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ತಂದಿದೆ’ ಎಂದರು.

ಸಿವಿಲ್ ನ್ಯಾಯಾಧೀಶರಾದ ದಿವ್ಯಶ್ರೀ ಸಿ.ಎಂ, ನರೇಂದ್ರ ಬಿ.ಆರ್, ಮತಗಟ್ಟೆ ಅಧಿಕಾರಿಗಳು ಇದ್ದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ವಾಗತಿಸಿದರು. ಶ್ರೀಧರ ಹೆಗಡೆ ನಿರೂಪಿಸಿದರು. ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.