
ಕುಮಟಾ: ತಾಲ್ಲೂಕಿನ ಕಲಭಾಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂದಿಗೋಣದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಿದ ‘ಸ್ವಚ್ಛ ಸಂಕೀರ್ಣ’ ಇನ್ನೂ ಬಾಗಿಲು ತೆರೆದಿಲ್ಲ. ಕಸ ಸಂಗ್ರಹಣೆಯೂ ನಡೆಯದ ಪರಿಣಾಮ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಕಾಣಸಿಗುತ್ತಿದೆ.
ಗ್ರಾಮ ಪಂಚಾಯತಿ ವತಿಯಿಂದ 2022ರಲ್ಲಿ ಅಂದಾಜು ₹4.75 ಲಕ್ಷ ವೆಚ್ಚದಲ್ಲಿ ಘನ ತ್ಯಾಜ್ಯಗಳ ವಿಲೇವಾರಿ ಸಲುವಾಗಿ ಸ್ವಚ್ಛ ಸಂಕೀರ್ಣ ನಿರ್ಮಿಸಲಾಗಿತ್ತು. ಘಟಕ ಕಾರ್ಯಾರಂಭ ಮಾಡದೆ ಅದರ ಬಾಗಿಲಿಗೆ ಅಳವಡಿಸಿದ್ದ ಬೀಗಕ್ಕೆ ತುಕ್ಕು ಹಿಡಿಯುತ್ತಿದೆ.
‘ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-66 ಹಾದು ಹೋಗಿದೆ. ಅದರ ಅಕ್ಕಪಕ್ಕದಲ್ಲಿನ ಪ್ರದೇಶದಲ್ಲಿ ವಾಹನ ಸವಾರರು ಕಸ ಎಸೆದು ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಇದ್ದೂ ಇಲ್ಲದಂತಾಗಿರುವುದರಿಂದ ಕಸ ಸಂಗ್ರಹಣೆಯೂ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಕಾಣಸಿಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.
‘ಗ್ರಾಮ ಪಂಚಾಯತಿ ಆಗಾಗ ಸ್ವಚ್ಛತಾ ಕಾರ್ಯ ಕೈಕೊಂಡು ಕಸ ಎಸೆಯದಂತೆ ಎಚ್ಚರಿಸುವ ನಾಮಫಲಕ ಅಳವಡಿಸಲಾಗುತ್ತಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಚಂದನ ಕುಬಾಲ.
‘ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ಘನತ್ಯಾಜ್ಯ ನಿರ್ವಹಣಾ ಕಾಯಿದೆ ಪ್ರಕಾರ ಸ್ವಚ್ಛ ಭಾರತ ಮಿಶನ್ ಯೋಜನೆಯಡಿ ಕೇಂದ್ರ ಸರ್ಕಾರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಘನ ತ್ಯಾಜ್ಯ ಘಟಕ ವಿಲೇವಾರಿಗೆ ಇಲ್ಲಿ 10 ಗುಂಟೆ ಜಾಗ ಮಂಜೂರಿ ಮಾಡಿದ್ದಾರೆ. ಅದು ಪಂಚಾಯತಿ ಪಹಣಿಯಲ್ಲಿ ನಮೂದಿದೆ. 2019ರ ಗ್ರಾಮ ಪಂಚಾಯತಿ ಸಭೆಯಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ನಿರ್ಣಯಿಸಿ ಸುಸಜ್ಜಿತ ಕಟ್ಟಡ ಸಹ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಬೀಗ ಜಡಿಯಲಾಗಿದೆ. ಗ್ರಾಮ ಪಂಚಾಯತಿಗೆ ಕಸ ಸಂಗ್ರಹ ವಾಹನ ಸಹ ನಿಡಲಾಗಿದ್ದು, ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ’ ಎಂದು ಅವರು ದೂರಿದರು.
‘ಘನ ತ್ಯಾಜ್ಯ ವಿಲೇವಾರಿ ಘಟಕ ಬಳಕೆ ಮಡದೆ, ಕಸ ಸಂಗ್ರಹಣೆಯನ್ನೂ ನಡೆಸದೆ ಗ್ರಾಮ ಪಂಚಾಯಿತಿ ಪರಿಸರ ಸಂರಕ್ಷಣೆ ಹಾಗೂ ಘನ ತ್ಯಾಜ್ಯ ನಿರ್ವಹಣಾ ಕಾಯ್ದೆಯ ಉಲ್ಲಂಘಿಸುತ್ತಿದೆ. ತಕ್ಷಣ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಬೇಕು’ ಎಂದು ಒತ್ತಾಯಿಸಿದರು.
ಸಮುದ್ರ ಮಾಲಿನ್ಯಕ್ಕೂ ಕಾರಣ
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೇವಗುಂಡಿ ಹೊಳೆ ಹರಿಯುತ್ತದೆ. ಅದರ ಅಕ್ಕ ಪಕ್ಕ ಕಾಂಡ್ಲಾ ವನ ಗಜನಿ ಪ್ರದೇಶ ವ್ಯಾಪಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದ್ದರಿಂದ ಕಸ ಸಂಗ್ರಹಣೆ ನಡೆಯುತ್ತಿಲ್ಲ. ಜನರು ಕಸವನ್ನು ದೇವಗುಂಡಿ ಸೇತುವೆ ಬಳಿ ಹೆದ್ದಾರಿಯಲ್ಲಿ ಎಸೆಯುತ್ತಾರೆ. ಅಲ್ಲಿಂದ ನದಿಗೆ ಸೇರುವ ಕಸವು ಕಾಂಡ್ಲಾವನಗಳಲ್ಲಿ ಸಿಲುಕಿಕೊಳ್ಳುತ್ತಿದೆ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಸೇರಿ ಜಲ ಮಾಲಿನ್ಯ ಹೆಚ್ಚಿದೆ’ ಎನ್ನುತ್ತಾರೆ ಕಲಭಾಗ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.