ADVERTISEMENT

ಮುಂಡಗೋಡ | ಕಸ ವಿಲೇವಾರಿ ನಿರ್ವಹಣೆ ಕೊರತೆ: ತುಕ್ಕು ಹಿಡಿದ ಯಂತ್ರೋಪಕರಣ

​ಶಾಂತೇಶ ಬೆನಕನಕೊಪ್ಪ
Published 22 ಜನವರಿ 2026, 7:06 IST
Last Updated 22 ಜನವರಿ 2026, 7:06 IST
ಮುಂಡಗೋಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಸಂಗ್ರಹಗೊಂಡಿದೆ
ಮುಂಡಗೋಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿ ಸಂಗ್ರಹಗೊಂಡಿದೆ   

ಮುಂಡಗೋಡ: ಪಟ್ಟಣದಲ್ಲಿ ಪ್ರತಿ ದಿನ ಐದಾರು ಟನ್‌ ಸಂಗ್ರಹವಾಗುವ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವಲ್ಲಿ ಹಾಗೂ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಯಂತ್ರೋಪಕರಣಗಳ ಅಳವಡಿಕೆ ಮತ್ತು ಬಳಕೆಯಲ್ಲಿ ಕಾಣುತ್ತಿರುವ ನಿರ್ಲಕ್ಷ್ಯದಿಂದ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಹಿನ್ನೆಡೆ ಆಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಪಟ್ಟಣದ 19 ವಾರ್ಡ್‌ಗಳಿಂದ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ವಾಹನಗಳು ಬಂದು ಮನೆ, ಮನೆ ಕಸವನ್ನು ಸಂಗ್ರಹಣೆ ಮಾಡುತ್ತಿವೆ. ಆದರೂ, ಪಟ್ಟಣದ ಹೊರವಲಯ ಹಾಗೂ ಮುಖ್ಯರಸ್ತೆ ಬದಿಯಲ್ಲಿ ಕಸದ ರಾಶಿ ಬೀಳುವುದು ಕಡಿಮೆಯಾಗಿಲ್ಲ. ಪಟ್ಟಣದ ಎಪಿಎಂಸಿ ಎದುರು, ಸನವಳ್ಳಿ ಹಾಗೂ ನ್ಯಾಸರ್ಗಿ ರಸ್ತೆ ಬದಿಯಲ್ಲಿ ನಿತ್ಯವೂ ಕಸವನ್ನು ಬಿಸಾಡಿರುವುದನ್ನು ಕಾಣಬಹುದು.

ಪಟ್ಟಣದ ಸ್ವಚ್ಛತೆ ಕುರಿತು ಈ ಹಿಂದೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಭಿತ್ತಿಪತ್ರ, ಗೋಡೆಬರಹದಿಂದ ಹಿಡಿದು ರಸ್ತೆ ಬದಿ ಕಸ ಹಾಕುವವರಿಗೆ ಎಚ್ಚರಿಕೆಯ ಜೊತೆಗೆ ದಂಡ ಹಾಕಲಾಗುತ್ತಿತ್ತು. ಆದರೆ, ಈಚೆಗಿನ ದಿನಗಳಲ್ಲಿ ಜಾಗೃತಿಯು ಕಾಟಾಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಬೇಸರದಿಂದ ಹೇಳುತ್ತಾರೆ.

ADVERTISEMENT

ʼಕಸ ಬೇರ್ಪಡಿಕೆ ಮಾಡಲು ಹೊಸದಾಗಿ ಯಂತ್ರೋಪಕರಣಗಳು ಬಂದಿವೆ. ಕೆಲವೊಂದು ಬಿಡಿ ಭಾಗಗಳು ಇನ್ನೂ ಬರಬೇಕಿದೆ. ಬಂದ ನಂತರ ಅಳವಡಿಕೆ ಕಾರ್ಯ ಆರಂಭವಾಗಲಿದೆ. ಈಗಾಗಲೇ ಶೆಡ್‌ ನಿರ್ಮಾಣವಾಗಿದೆʼ ಎಂದು ವಿಲೇವಾರಿ ಘಟಕದ ಸಿಬ್ಬಂದಿ ವಿವೇಕ ಪಾಟೀಲ ಹೇಳಿದರು.

ʼಕಸ ವಿಲೇವಾರಿ ಘಟಕದಲ್ಲಿ ಕೆಲ ವರ್ಷಗಳಿಂದ ವರ್ಷಕ್ಕೆ ಒಮ್ಮೆಯಾದರೂ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತದೆ. ಘಟಕದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಆಕಸ್ಮಿಕ ಬೆಂಕಿಗೆ ಕಾರಣ ತಿಳಿಯದಂತಾಗಿದೆ. ಘಟಕದ ನಿರ್ವಹಣೆಗೆ ನೇಮಿಸಿಕೊಳ್ಳುವ ಸಿಬ್ಬಂದಿಯನ್ನು, ಅನ್ಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ, ನಿರ್ವಹಣೆ ಮಾಡುವಲ್ಲಿ ಹಿನ್ನಡೆ ಆಗುತ್ತಿದೆʼ ಎಂದು ದಲಿತ ಸಂಘರ್ಷ ಸಮಿತಿಯ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಳ್ಳಮ್ಮನವರ ಆರೋಪಿಸುತ್ತಾರೆ.

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಒಂದು ಬೇಲಿಂಗ್‌ ಯಂತ್ರ ಹಾಗೂ ಪ್ಯಾಡ್‌ ಬರ್ನಿಂಗ್‌ ಯಂತ್ರ ಹಾನಿಯಾಗಿವೆ. ಒಣ ಕಸ ಇದ್ದಿದ್ದರಿಂದ ಬೆಂಕಿ ವೇಗ ಪಡೆಯಲು ಕಾರಣವಾಗಿದೆ
ಸಂತೋಷಕುಮಾರ ಮುಖ್ಯಾಧಿಕಾರಿ

ನಿರ್ಹಹಣೆಯ ಕೊರತೆ

ಇಲ್ಲಿನ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಎಲ್ಲವೂ ಇದೆ. ಆದರೆ ನಿರ್ವಹಣೆಯ ಕೊರತೆ ಎದ್ದು ಕಾಣುತ್ತದೆ. ವಿಶಾಲವಾದ ಜಾಗದಲ್ಲಿ ಕಸ ಸಂಗ್ರಹಣೆ ಮಾಡಲು ಬೇರ್ಪಡಿಸಲು ಕಸದಿಂದ ಗೊಬ್ಬರ ತಯಾರಿಸಲು ಪ್ಲಾಸ್ಟಿಕ್‌ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲು ಕಸ ಸಂಗ್ರಹಣೆಯ ತೂಕ ಅಳೆಯಲು ಕಣ್ಗಾವಲಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಎಲ್ಲ ವ್ಯವಸ್ಥೆಯಿದೆ. ಆದರೆ ಯಂತ್ರೋಪಕರಣಗಳು ತುಕ್ಕು ಹಿಡಿದ ಸ್ಥಿತಿಯಲ್ಲಿ ಕಂಡುಬರುತ್ತವೆ. ಅನುದಾನದ ಸದ್ಭಳಕೆ ಆಗದಿರುವುದು ಒಂದೆಡೆಯಾದರೇ ಅಳವಡಿಸಿದ ಯಂತ್ರೋಪಕರಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಮತ್ತೊಂದೆಡೆ. ಸಂಗ್ರಹಿಸಿದ ಕಸವನ್ನು ಯಂತ್ರೋಪಕರಣಗಳಿಂದ ಬೇರ್ಪಡಿಸಿ ಆದಾಯ ಗಳಿಸಬೇಕೆನ್ನುವ ಪರಿಕಲ್ಪನೆಯೇ ಇಲ್ಲಿ ಮಾಯವಾಗಿದೆ. ಹಳೆಯ ಕಸದ ರಾಶಿಯೊಂದಿಗೆ ಹೊಸ ಕಸವನ್ನು ಸೇರಿಸಿ ಮತ್ತಷ್ಟು ಗುಡ್ಡೆ ಮಾಡಿದ್ದು ಬಿಟ್ಟರೇ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಪದ್ದತಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.