ADVERTISEMENT

ಎಸಳೆ: ‘ಪಕ್ಷಿಗಳಿಗಾಗಿ ನೀರು’ ಅಭಿಯಾನ

ಗಿಡಗಳಿಗೆ ನೀರು, ಕಾಳು ತುಂಬಿದ ಪಾತ್ರೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 14:56 IST
Last Updated 30 ಏಪ್ರಿಲ್ 2022, 14:56 IST
ಎಸಳೆ ಗ್ರಾಮದ ಮಾರಿಕಾಂಬಾ ವನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಪಕ್ಷಿಗಳಿಗಾಗಿ ನೀರು’ ಅಭಿಯಾನಕ್ಕೆ ಪಶುವೈದ್ಯ ಡಾ.ಗಣೇಶ ಹೆಗಡೆ ಚಾಲನೆ ನೀಡಿದರು.
ಎಸಳೆ ಗ್ರಾಮದ ಮಾರಿಕಾಂಬಾ ವನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಪಕ್ಷಿಗಳಿಗಾಗಿ ನೀರು’ ಅಭಿಯಾನಕ್ಕೆ ಪಶುವೈದ್ಯ ಡಾ.ಗಣೇಶ ಹೆಗಡೆ ಚಾಲನೆ ನೀಡಿದರು.   

ಶಿರಸಿ: ಪಕ್ಷಿಗಳ ಆವಾಸಸ್ಥಾನ ರಕ್ಷಣೆ ಮಾಡುವುದು ಇಂದಿನ ಅಗತ್ಯತೆಯಾಗಿದೆ. ಅವುಗಳ ಆವಾಸದ ಹತ್ತಿರ ನೀರಿನ ಮೂಲಗಳು ಇದ್ದರೆ ಪಕ್ಷಿಗಳ ವೈವಿಧ್ಯ ಕಾಪಾಡಲು ಸಾಧ್ಯ ಎಂದು ಪಶುವೈದ್ಯ ಡಾ.ಗಣೇಶ ಹೆಗಡೆ ಹೇಳಿದರು.

ತಾಲ್ಲೂಕಿನ ಎಸಳೆ ಗ್ರಾಮದ ಮಾರಿಕಾಂಬಾ ವನದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಪಕ್ಷಿಗಳಿಗಾಗಿ ನೀರು’ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ‘ನಗರಗಳು ಬೆಳೆದಂತೆ ಅವುಗಳಿಗೆ ವಾಸ ಸ್ಥಾನಕ್ಕೆ ಧಕ್ಕೆಯುಂಟಾಗುತ್ತಿದೆ. ಭೂಮಿ ನಿರ್ವಹಣೆ ಮತ್ತು ಅರಣ್ಯ ಸಂರಕ್ಷಣೆ ಮಾಡುವ ಯೋಜನೆಗಳು ಪಕ್ಷಿಸ್ನೇಹಿ ತಂತ್ರಗಳಿಂದ ಕೂಡಿರಬೇಕು’ ಎಂದರು.

ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿ ಸದಸ್ಯೆ ಸಮೀಕ್ಷಾ ಫಾಯ್ದೆ ಮಾತನಾಡಿ, ‘ಪಕ್ಷಿಗಳ ಸಂರಕ್ಷಣೆಯಿಂದ ಬೀಜ ಪ್ರಸರಣವಾಗಿ ಸಹಜ ಅರಣ್ಯ ಬೆಳೆಯಲು ಕಾರಣವಾಗುತ್ತದೆ’ ಎಂದರು.

ADVERTISEMENT

ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಪಾತ್ರೆಗಳಲ್ಲಿ ಪಕ್ಷಿಗಳಿಗೆ ನೀರು ಹಾಗೂ ಕಾಳು ಇಟ್ಟು ವನದಲ್ಲಿ ಗಿಡಗಳಿಗೆ ಜೋಡಿಸಲಾಯಿತು. ವನದಲ್ಲಿನ ಪ್ಲಾಸ್ಟಿಕ್ ಕಸಗಳನ್ನು ಸ್ವಚ್ಚಗೊಳಿಸಲಾಯಿತು. ಅಗ್ನಿಹೋತ್ರದ ಭಸ್ಮ, ಜೀವಾಮೃತವನ್ನು ಔಷಧ ಸಸ್ಯಗಳಿಗೆ ಸಿಂಪಡಿಸಲಾಯಿತು.

ಪ್ರಮುಖರಾದ ಚಂದ್ರು ಎಸಳೆ, ಧನಂಜಯ ದಾನೋಜಿ, ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಿವಾನಂದ ಹೊಂಗಲ್, ಡಾ.ಅಶೋಕ ಹರಸೂರು, ವಿದ್ಯಾರ್ಥಿಗಳಾದ ಭಾರ್ಗವ ಹೆಗಡೆ, ಶ್ರೀಲಕ್ಷ್ಮೀ, ದೀಪಕ ಆರೇರ್, ಸ್ಪೂರ್ತಿ ಗಂಗೋಳ್ಳಿ, ಧನ್ಯಶ್ರೀ ದೇವಾಡಿಗ ಎಸಳೆ, ಇತರರು ಇದ್ದರು.

ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿ ಭಟ್ಟ್ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ಎನ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.