
ಕಾರವಾರ: ಹದಗೆಟ್ಟ ಒಳಚರಂಡಿ ವ್ಯವಸ್ಥೆ, ಚರಂಡಿಗಳ ವ್ಯವಸ್ಥಿತ ನಿರ್ವಹಣೆಯ ಕೊರತೆಯ ಪರಿಣಾಮ ಜಿಲ್ಲೆಯ ನಗರಗಳ ವ್ಯಾಪ್ತಿಯಲ್ಲಿನ ಜಲಮೂಲಗಳು ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
ಕಾರವಾರ, ಶಿರಸಿ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಕೆಲಸ ನಿರ್ವಹಿಸುವಲ್ಲಿ ವ್ಯತ್ಯಯ ಹೆಚ್ಚುತ್ತಿರುವ ದೂರುಗಳಿವೆ. ನೀರು ಶುದ್ಧೀಕರಣಗೊಳ್ಳದೆ ಜಲಮೂಲದ ಒಡಲು ಸೇರುತ್ತಿದೆ. ಇದರಿಂದ ನೀರಿನಲ್ಲಿ ಕೋಲಿ ಫಾರ್ಮಾ ಪ್ರಮಾಣ ಹೆಚ್ಚುತ್ತಿದೆ ಎಂಬುದು ತಜ್ಞರ ಆರೋಪ.
‘ಕಾರವಾರ ನಗರದ ಶೇ 80ರಷ್ಟು ವ್ಯಾಪ್ತಿಯ ಮಲಿನ ನೀರು ಕೋಣೆನಾಲಾ ಮೂಲಕ ಸಾಗಿ, ಅರಬ್ಬಿ ಸಮುದ್ರ ಸೇರುತ್ತಿದೆ. ಗಾಂಧಿ ನಗರದಲ್ಲಿರುವ ಶುದ್ಧೀಕರಣ ಘಟಕ ಬಹುತೇಕ ಅವಧಿ ಕೆಟ್ಟು ಹೋಗಿರುತ್ತದೆ. ದುರ್ವಾಸನೆಯಿಂದ ಕೂಡಿದ ಮಲಿನ ನೀರು ಕಡಲಿಗೆ ಸೇರುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿತೇಶ ನಾಯ್ಕ.
‘ಸದ್ಯ ಕಾರವಾರದಲ್ಲಿ 1.5 ಮಿಲಿಯನ್ ಲೀ. ಸಂಸ್ಕರಿಸುವ ಘಟಕವಿದೆ. ನೀರಿನ ಒತ್ತಡ ಹೆಚ್ಚುತ್ತಿದ್ದು, 3.5 ಮಿಲಿಯನ್ ಲೀ. ಸಾಮರ್ಥ್ಯದ ಘಟಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ನಗರಸಭೆಯ ಆರೋಗ್ಯ ನಿರೀಕ್ಷಕ ಸುನೀಲ ಗಾವಡೆ.
ಹಳಿಯಾಳ ಪಟ್ಟಣದಲ್ಲಿ 9 ಕೆರೆಗಳಿದ್ದು ತ್ಯಾಜ್ಯ ಎಸೆಯುವುದರಿಂದ ಮಲಿನಗೊಳ್ಳುತ್ತಿದೆ. ಗೌಳಿಗಲ್ಲಿಯ ಕೆರೆ ತೀರಾ ಕಲುಷಿತಗೊಂಡಿತದೆ. ಅಕ್ಕ ಪಕ್ಕದ ಮನೆಯ ಚರಂಡಿಯ ತ್ಯಾಜ್ಯ ನೀರು ಕಾಲುವೆ ಮುಖಾಂತರ ಸಾಗಿ ಕೆರೆಯ ಮಲಿನಗೊಳ್ಳುತ್ತಿದೆ. ಡೌವಗೇರಿ ಕೆರೆ ಸಹ ತೀರಾ ಕೆಸರಿನಿಂದ ಕೂಡಿದೆ ಎಂಬುದು ಜನರ ದೂರು.
ಗೌಳಿ ಕೆರೆಗೆ ತ್ಯಾಜ್ಯ ನೀರು ಸಾಗದಂತೆ ಬೈಪಾಸ್ ಕಾಲುವೆ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಪುರಸಭೆಯಿಂದ ಸಿದ್ದಪಡಿಸಲಾಗಿದೆ ಎಂದು ಪುರಸಭೆ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.
‘ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ತ್ಯಾಜ್ಯ ನೀರು ಸೋರಿಕೆಯಾಗಿ ಚರಂಡಿ ನೀರು ನದಿ ಮೂಲ ಸೇರಿ ಕಲುಷಿತಗೊಳ್ಳುತ್ತಿದೆ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಎಡಿಬಿ ಯೋಜನೆಯಡಿ ನಿರ್ಮಿಸಿದ ಒಳಚರಂಡಿ ಇಟ್ಟಿಗೆ ಚೇಂಬರ್ ಸೋರಿಕೆಯಿಂದಾಗಿ ಅಲ್ಲಲ್ಲಿ ತ್ಯಾಜ್ಯ ನೀರು ಸೋರಿಕೆಯಾಗಿ ಚರಂಡಿಯ ಮೂಲಕ ನದಿ ಸೇರುತ್ತಿದೆ. ಪಟ್ಟಣದ ಗೌಸಿಯಾ ಸ್ಟ್ರೀಟ್‌ನಲ್ಲಿರುವ ಒಳಚರಂಡಿ ತ್ಯಾಜ್ಯ ನೀರು ಪಂಪ್ ಮಾಡುವ ಪಂಪ್ ಹೌಸ್ ಕೈಕೊಟ್ಟಾಗ ತ್ಯಾಜ್ಯ ನೀರು ಸರಾಬಿ ನದಿ ಸೇರಿ ಕಲುಷಿತಗೊಳ್ಳುವುದು ಸಾಮಾನ್ಯವಾಗಿದೆ’ ಎಂದು ಸ್ಥಳೀಯ ಶ್ರೀನಿವಾಸ ನಾಯ್ಕ ದೂರಿದರು.
ಅಂಕೋಲಾ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಣಿಜ್ಯ ಕಟ್ಟಡಗಳು, ಅಪಾರ್ಟ್‌ಮೆಂಟ್, ರೆಸ್ಟೋರೆಂಟ್‍ಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವುಗಳ ತ್ಯಾಜ್ಯ ನೀರು ಚರಂಡಿಯ ಮೂಲಕ ಪಟ್ಟಣದಲ್ಲಿ ಸಣ್ಣದಾಗಿ ಹರಿಯುವ ಹಳ್ಳಗಳಿಗೆ ಬಿಡಲಾಗುತ್ತಿದೆ. ಅವು ಸಮುದ್ರಕ್ಕೆ ಸೇರಿ ಮಲಿನಗೊಳ್ಳುತ್ತಿದೆ ಎಂಬುದು ಸಾರ್ವಜನಿಕರ ದೂರು.
ಸಿದ್ದಾಪುರ ಪಟ್ಟಣದ ಹಲವೆಡೆ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಹೊಸೂರಿನ ಕೆರೆಗುಡ್ಡೆ ವರ‍್ಡನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಚರಂಡಿ ಇದ್ದು, ಉಳಿದ ಭಾಗಗಳಲ್ಲಿ ಚರಂಡಿ ನಿರ್ಮಿಸಿಲ್ಲ. 10 ವರ್ಷಗಳಿಂದ ಚರಂಡಿ ವ್ಯವಸ್ಥೆ ಸರಿಪಡಿಸಲು ಪಟ್ಟಣ ಪಂಚಾಯಿತಿಗೆ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ ಎಂಬುದು ಹೊಸೂರಿನ ನಿವಾಸಿ ರಾಘವೇಂದ್ರ ಭಟ್ಟ ಅವರ ದೂರು.
ಹೊನ್ನಾವರದ ಅರೆಸಾಮಿ ಕೆರೆ ಉಪೇಕ್ಷೆಗೊಳಗಾಗಿದ್ದು ವಾಹನಗಳನ್ನು ತೊಳೆಯುವ ಹಾಗೂ ತ್ಯಾಜ್ಯ ಎಸೆಯುವ ಜಾಗವಾಗಿ ಮಾರ್ಪಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಶೆಟ್ಟಿಕೆರೆ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದ್ದು ನೀರು ಮಲಿನಗೊಂಡಿದೆ. ಪ್ರಭಾತನಗರದ ಸಾರ್ವಜನಿಕ ಬಾವಿಗಳಲ್ಲಿ ಗಿಡಗಂಟಿಗಳು ತುಂಬಿದ್ದು ಜನರಿಗೆ ಕಸ ಸುರಿಯುವ ದೊಡ್ಡ ತೊಟ್ಟಿಗಳಾಗಿವೆ ಎಂಬುದು ಜನರ ದೂರು. ಗುಂಡಬಾಳ, ಬಡಗಣಿ, ಶರಾವತಿ ಮೊದಲಾದ ನದಿಗಳಲ್ಲಿ ಸೇತುವೆಯ ಮೇಲಿನಿಂದ ಸಮೀಪದ ಅಂಗಡಿಕಾರರು ರಾತ್ರಿ ವೇಳೆ ತ್ಯಾಜ್ಯ ಸುರಿಯುತ್ತಿರುವ ದೂರುಗಳಿವೆ.
ಯಲ್ಲಾಪುರ ಪಟ್ಟಣ ಉತ್ತಮ ಜಲಮೂಲ ಹೊಂದಿರುವ 10ಕ್ಕೂ ಹೆಚ್ಚು ಕೆರೆಗಳನ್ನು ಹೊಂದಿದ್ದರೂ ಕೊಳಕು ನೀರು ಹರಿದು ಹೂಳು ತುಂಬಿದ್ದು, ಕೆರೆಯ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ಜನರ ದೂರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಎಂ.ಜಿ.ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಸಿದ್ದಾಪುರದ ಸೊರಬಾ ರಸ್ತೆ ಮತ್ತು ಸಾಯಿ ನಗರದಲ್ಲಿ ಮುಖ್ಯ ಕಾಲುವೆ ಹಾದು ಹೋಗಿದೆ. ಅಲ್ಲಿ ಹರಿಯುವ ತ್ಯಾಜ್ಯದ ನೀರು ಬಾವಿಗೆ ಸೇರುತ್ತಿದೆಆದಿತ್ಯ ಹೆಗಡೆ ಸಿದ್ದಾಪುರ ನಿವಾಸಿ
ಹಳಿಯಾಳದ ಗೌಳಿ ಕೆರೆ ದಿನದಿಂದ ದಿನಕ್ಕೆ ತೀರ ಮಲಿನಗೊಳ್ಳುತ್ತಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚುತ್ತಿದೆವಿ.ವಿ.ರೆಡ್ಡಿ ಹಳಿಯಾಳ ವಕೀಲ
ಕುಮಟಾ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಕಡ್ಡಾಯಗೊಳಿಸದಿದ್ದರೆ ಕೆಲವೇ ವರ್ಷಗಳಲ್ಲಿ ಜಲಮೂಲಗಳು ಕಲುಷಿತಗೊಳ್ಳಲಿವೆದಿನಕರ ಶೆಟ್ಟಿ ಶಾಸಕ
ಹಳ್ಳಿಗೆ ನುಗ್ಗುವ ಕೊಳಚೆ ನೀರು
ಶಿರಸಿ ನಗರದಲ್ಲಿ ನಿತ್ಯ 20-25 ಲಕ್ಷ ಲೀಟರ್ ನೀರು ತ್ಯಾಜ್ಯ ನೀರಾಗಿ ತೆರೆದ ಚರಂಡಿಗೆ ಸೇರಿ ಯಾವುದೇ ಸುರಕ್ಷಿತ ಕ್ರಮ ಅನುಸರಿಸದ ಕಾರಣ ನೇರವಾಗಿ ಗ್ರಾಮೀಣ ಭಾಗದ ಜಲಮೂಲ ಕಲುಷಿತವಾಗುತ್ತಿದೆ. ಮನೆ ಬಳಕೆ ಶೌಚಾಲಯ ಮೂತ್ರಾಲಯ ಆಸ್ಪತ್ರೆ ಸಣ್ಣ ಕೈಗಾರಿಕೆಗಳ ತ್ಯಾಜ್ಯವೂ ಸೇರುತ್ತಿದೆ ಎಂಬುದು ಜನರ ದೂರು. ‘ನಗರ ಪ್ರದೇಶದಿಂದ ಪುಟ್ಟನಮನೆ ಸಹ್ಯಾದ್ರಿ ತಗ್ಗು ಆನೆಹೊಂಡ ಕೋಟೆಕೆರೆ ಕೆಳಭಾಗವಾದ ಕೆರೆಗುಂಡಿ ಸೇರಿದಂತೆ ಏಳಕ್ಕೂ ಹೆಚ್ಚು ಕಡೆಗಳಲ್ಲಿ ತ್ಯಾಜ್ಯ ನೀರು ನೇರವಾಗಿ ಶುದ್ಧ ಕುಡಿಯುವ ನೀರಿನ ಮೂಲಕ್ಕೆ ಸೇರ್ಪಡೆಯಾಗುತ್ತಿದೆ. ಪುಟ್ಟನಮನೆ ಹಾಗೂ ಕೆರೆಗುಂಡಿ ಪ್ರದೇಶದಲ್ಲಿ ನೇರವಾಗಿ ಕೃಷಿ ಜಮೀನಿನಲ್ಲಿ ಈ ತ್ಯಾಜ್ಯ ನೀರು ಹರಿದು ಹೋಗುತ್ತದೆ. ಬೇಸಿಗೆ ಕಾಲದಲ್ಲಿ ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿದ್ದರೆ ಮಳೆಗಾಲದ ಸಂದರ್ಭದಲ್ಲಿ ಜಮೀನಿಗೆ ಕೊಳಚೆ ನೀರು ನುಗುತ್ತಿದೆ’ ಎನ್ನುತ್ತಾರೆ ಪುಟ್ಟನಮನೆಯ ವಿಶ್ವನಾಥ ಕೃಷಿಕ ಹೆಗಡೆ.
ಕಾಳಿ ನದಿಗೆ ಮಲಿನ ನೀರು
ದಾಂಡೇಲಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮೂರು ವರ್ಷ ಕಳೆದರೂ ಮುಗಿದಿಲ್ಲ. ಹಳೇ ದಾಂಡೇಲಿ ಕುಳಗಿ ರಸ್ತೆ ಬರ‍್ಜಿ ರಸ್ತೆ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಹತ್ತಿರ ಹಾಗೂ ಸೇರಿದಂತೆ ಅನೇಕ ಕಡೆ ನಗರದ ಕೊಳಚೆ ನೀರು ನೇರವಾಗಿ ನದಿಗೆ ಸೇರುತ್ತಿದೆ. ‘ಮೂರು ನಂಬರ ಗೇಟ್ ನೀರು ಸೋಸಿ ಹೋಗಲು ಕಬ್ಬಿಣದ ಜರಡಿ ಹಾಕಲಾಗಿದ್ದು ಮಲಿನ ನೀರಿನಲ್ಲಿ ಪ್ಲಾಸ್ಟಿಕ್ ಇತರೆ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು’ ಎಂದು ನಗರಸಭೆ ಪರಿಸರ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. ‘ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕೈಗಾರಿಕಾ ತಾಜ್ಯದ ನೀರು ಹಾಲಮಡ್ಡಿ ಹತ್ತಿರ ಕಾಳಿ ನದಿಗೆ ಸೇರುತ್ತಿದೆ. ಇದರಿಂದ ನದಿ ನೀರು ಮಾಲಿನ್ಯವಾಗುತ್ತಿದೆ. ಜನರು ಆರೋಗ್ಯ ದೃಷ್ಟಿಯಿಂದ ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ನೀರನ್ನು ಶುದ್ಧೀಕರಿಸಿ ನದಿ ಬಿಡಬೇಕು’ ಎಂಬುದು ಪರಿಸರ ವಾದಿಗಳ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.