ADVERTISEMENT

ಜೊಯಿಡಾ: ಅಣೆಕಟ್ಟೆಗಾಗಿ ಊರು ತೊರೆದವರಿಗೆ ಸಿಗದ ನೀರು

ರಾಮನಗರದಲ್ಲಿ ಪ್ರತಿ ವರ್ಷವೂ ಜೀವಜಲಕ್ಕೆ ಪರದಾಟ; ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ

ಜ್ಞಾನೇಶ್ವರ ಜಿ.ದೇಸಾಯಿ
Published 22 ಏಪ್ರಿಲ್ 2025, 6:16 IST
Last Updated 22 ಏಪ್ರಿಲ್ 2025, 6:16 IST
ಜೊಯಿಡಾದಲ್ಲಿ ಸೋನಾರವಾಡ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಜೆಜೆಎಂ ಯೋಜನೆಯಡಿ ನಿರ್ಮಿಸಿದ ಜಲಸಂಗ್ರಹಾಗಾರಕ್ಕೆ ನೀರು ಪೂರೈಕೆಯಾಗದೆ ಬಳಕೆಯಾಗದೆ ಉಳಿದುಕೊಂಡಿದೆ 
ಜೊಯಿಡಾದಲ್ಲಿ ಸೋನಾರವಾಡ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಜೆಜೆಎಂ ಯೋಜನೆಯಡಿ ನಿರ್ಮಿಸಿದ ಜಲಸಂಗ್ರಹಾಗಾರಕ್ಕೆ ನೀರು ಪೂರೈಕೆಯಾಗದೆ ಬಳಕೆಯಾಗದೆ ಉಳಿದುಕೊಂಡಿದೆ    

ಜೊಯಿಡಾ: ಸೂಪಾ ಅಣೆಕಟ್ಟೆ ನಿರ್ಮಾಣ ಯೋಜನೆಗೆ ಗ್ರಾಮಗಳನ್ನು ಬಿಟ್ಟು ರಾಮನಗರಕ್ಕೆ ಬಂದು ಬದುಕು ಕಟ್ಟಿಕೊಂಡ ನಿರಾಶ್ರಿತರು, ಅರ್ಧ ಶತಮಾನ ಕಳೆದರೂ ಕುಡಿಯುವ ನೀರಿಗೆ ದಿನವೂ ಪರದಾಡುತ್ತಿದ್ದಾರೆ.

ತಾಲ್ಲೂಕಿನ ರಾಮನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದು ಅರ್ಧ ಶತಮಾನದ ಸಮಸ್ಯೆಯಾಗಿದ್ದು ಇಲ್ಲಿನ ಸ್ಥಳೀಯರು ನೀರಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಅಣಶಿ, ಕುಂಬಾರವಾಡ, ಜೊಯಿಡಾ, ನಾಗೋಡಾ, ಜಗಲಪೇಟ್, ಅಸು, ಶಿಂಗರಗಾವ, ಆಖೇತಿ, ರಾಮನಗರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ.

ADVERTISEMENT

ಜೊಯಿಡಾದ ಸೋನಾರವಾಡಾಗೆ ನೀರು ಪೂರೈಕೆ ಮಾಡಲು 2021-22ರ ಅವಧಿಯಲ್ಲಿ ಸುಮಾರು ₹75 ಲಕ್ಷ ಅನುದಾನದಲ್ಲಿ ಮನೆ ಮನೆಗೆ ನಳ ಸಂಪರ್ಕ ನೀಡಿ ಟ್ಯಾಂಕ್ ನಿರ್ಮಿಸಲಾಗಿತ್ತು. ಮೂರು ವರ್ಷ ಕಳೆದರೂ ಇನ್ನೂ ಟ್ಯಾಂಕ್‍ಗೆ ನೀರು ಹರಿದಿಲ್ಲ. ಕುಂಬಾರವಾಡದಲ್ಲಿಯೂ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು ಜನಪ್ರತಿನಿಧಿಗಳು ಜೆಜೆಎಂ ಯೋಜನೆಯನ್ನು ಬಹಿಷ್ಕರಿಸಿದ್ದರಿಂದ ಯೋಜನೆ ಟ್ಯಾಂಕ್ ನಿರ್ಮಾಣಕ್ಕೆ ಸೀಮಿತವಾಗಿದೆ ಎಂಬುದು ಸ್ಥಳೀಯರ ದೂರು.

ತಾಲ್ಲೂಕು ಕೇಂದ್ರ ಜೊಯಿಡಾ ಮತ್ತು ರಾಮನಗರದಲ್ಲಿ ವಾರಕ್ಕೆ ಎರಡು ಕೆಲವೊಮ್ಮೆ ವಾರಕ್ಕೆ ಒಮ್ಮೆ ನೀರನ್ನು ಬಿಡಲಾಗುತ್ತದೆ. ಆರ್ಥಿಕ ಸ್ಥಿತಿವಂತರು ಕೊಳವೆಬಾವಿ ಕೊರೆಯಿಸಿದ್ದು, ಬಡವರು ನೀರಿಗಾಗಿ ಪರದಾಡುತ್ತಿದ್ದಾರೆ.

ನಿರಾಶ್ರಿತರ ಕೇಂದ್ರ ರಾಮನಗರ ಸೇರಿದಂತೆ ಜಗಲಪೇಟ್, ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪಾಂಡರಿ ನದಿಯಿಂದ ನೀರನ್ನು ಸರಬರಾಜು ಮಾಡಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸುಮಾರು ₹28 ಕೋಟಿ ಅನುದಾನದ ಯೋಜನೆಗೆ ಶಾಸಕರು ಚಾಲನೆ ನೀಡಿ ವರ್ಷ ಕಳೆದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ಜೊಯಿಡಾದಲ್ಲಿಯೂ ಸುಮಾರು ₹3 ಕೋಟಿ ಅನುದಾನದ ಜೆಜೆಎಂ ಕಾಮಗಾರಿ ಒಂದು ವರ್ಷದಿಂದ ಪ್ರಾರಂಭ ಇದ್ದು ನೀರು ಮಾತ್ರ ಹರಿಯುತ್ತಿಲ್ಲ. ತಾಲ್ಲೂಕಿನಲ್ಲಿ 2021-22 ರಲ್ಲಿ ಒಟ್ಟು 49 ಜೆಜೆಎಂ ಕಾಮಗಾರಿಗಳು ಮಂಜೂರಾಗಿದ್ದು ಇವುಗಳಲ್ಲಿ 10 ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.

‘ರಾಮನಗರದಲ್ಲಿ ಕುಡಿಯುವ ನೀರು ಜ್ವಲಂತ ಸಮಸ್ಯೆಯಾಗಿದೆ. ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು’ ಎನ್ನುತ್ತಾರೆ ರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾಜಿ ಗೋಸಾವಿ.

‘ರಾಮನಗರಕ್ಕೆ ಕುಡಿಯುವ ನೀರನ್ನು ಒದಗಿಸುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕಾಳಿ,ಪಾಂಡರಿ ನದಿಗಳು ಪಕ್ಕದಲ್ಲಿ ಹರಿಯುತ್ತಿದ್ದರೂ ನಮಗೆ ನೀರು ಇಲ್ಲ. ಕೃಷಿ ಜಮೀನು ಸಹ ನೀರಿಲ್ಲದೆ ಪಾಳು ಬಿದ್ದಿದೆ’ ಎನ್ನುತ್ತಾರೆ ರಾಮನಗರ ನಿವಾಸಿ ಮಂಜುನಾಥ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.