ADVERTISEMENT

ಬರಿದಾದ ಜಲಮೂಲ: ಮೂರು ದಿನಕ್ಕೊಮ್ಮೆ ಜೀವಜಲ

ಮಾರಿಗದ್ದೆ, ಕೆಂಗ್ರೆ ಹೊಳೆಯ ಜಾಕ್‌ವೆಲ್‌ನಲ್ಲಿ ನೀರು ಸಂಗ್ರಹ ತೀವ್ರ ಇಳಿಮುಖ

ಸಂಧ್ಯಾ ಹೆಗಡೆ
Published 17 ಮೇ 2019, 19:30 IST
Last Updated 17 ಮೇ 2019, 19:30 IST
ಬರಿದಾಗಿರುವ ಅಘನಾಶಿನಿ ನದಿಯಲ್ಲಿ ಹೊಂಡದಲ್ಲಿ ನೀರು ಸಂಗ್ರಹವಾಗಿರುವುದು
ಬರಿದಾಗಿರುವ ಅಘನಾಶಿನಿ ನದಿಯಲ್ಲಿ ಹೊಂಡದಲ್ಲಿ ನೀರು ಸಂಗ್ರಹವಾಗಿರುವುದು   

ಶಿರಸಿ: ಮಲೆನಾಡಿನ ಸೆರಗಿನಲ್ಲಿರುವ ತಾಲ್ಲೂಕಿನ ಹಳ್ಳಿಗಳು ಬಿರು ಬಿಸಿಲಿಗೆ ಬಳಲಿವೆ. ಹಳ್ಳ–ಕೊಳ್ಳಗಳು, ನದಿಗಳು ಹರಿವನ್ನು ನಿಲ್ಲಿಸಿವೆ. ಜಲಮೂಲ ಬರಿದಾದ ಪರಿಣಾಮ ನಗರವಾಸಿಗಳಿಗೆ ಬರದ ಬಿಸಿ ತಟ್ಟಿದೆ. ನಗರಸಭೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.

ನಗರಕ್ಕೆ ನೀರು ಪೂರೈಕೆ ಮಾಡುವ ಕೆಂಗ್ರೆ ಹೊಳೆ ಹಾಗೂ ಅಘನಾಶಿನಿ ನದಿಗಳು ಹರಿವನ್ನು ನಿಲ್ಲಿಸಿ, ಅಸ್ಥಿಪಂಜರದಂತಾಗಿವೆ. ನದಿಯ ಗುಂಟ ಅಲ್ಲಲ್ಲಿ ಹೊಂಡದಲ್ಲಿ ಮಾತ್ರ ನೀರು ನಿಂತಿರುವುದು ಕಾಣುತ್ತಿದೆ. ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರೂ, ಬಿಸಿಲಿನ ಝಳಕ್ಕೆ ಜಲಮೂಲಗಳು ಬತ್ತುತ್ತಿವೆ.

‘ಹಿಂದಿನ ಬೇಸಿಗೆಗಿಂತ ಈ ಬಾರಿ ಕೆಂಗ್ರೆ ಹಾಗೂ ಮಾರಿಗದ್ದೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆಂಗ್ರೆ ಹೊಳೆಯಲ್ಲಿ ಎರಡು ಕಡೆ ತಾತ್ಕಾಲಿಕ ಒಡ್ಡು ನಿರ್ಮಿಸಿದ್ದರೂ, ನೀರು ಸಂಗ್ರಹವಾಗುತ್ತಿಲ್ಲ. ಮೂರು ದಿನಕ್ಕೊಮ್ಮೆ 10 ಲಕ್ಷ ಲೀಟರ್ ನೀರು ಸಿಗುತ್ತಿದೆ. ನೀರಿನ ಲಭ್ಯತೆಯಿದ್ದರೆ ಪ್ರತಿದಿನ 25 ಲಕ್ಷ ಲೀಟರ್ ನೀರನ್ನು ಇಲ್ಲಿಂದ ಎತ್ತಿ, ನಗರದ ನಿವಾಸಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು’ ಎಂದು ನಗರಸಭೆ ಎಂಜಿನಿಯರ್ ಸೂಫಿಯಾನಾ ತಿಳಿಸಿದರು.

ADVERTISEMENT

‘ಅಘನಾಶಿನಿ ನದಿಯಲ್ಲೂ ನೀರಿಲ್ಲ. ಹೀಗಾಗಿ, ಮಾರಿಗದ್ದೆಯ ಜಾಕ್‌ವೆಲ್ ಸ್ಥಳದಲ್ಲಿ ನೀರಿನ ಸಂಗ್ರಹ ತೀವ್ರ ಕುಸಿದಿದೆ. ಪ್ರತಿದಿನ ಇಲ್ಲಿಂದ 40 ಲಕ್ಷ ಲೀಟರ್ ನೀರನ್ನು ಎತ್ತಲಾಗುತ್ತಿತ್ತು. ಈಗ ಮೂರು ದಿನಕ್ಕೊಮ್ಮೆ 20 ಲಕ್ಷ ಲೀಟರ್ ನೀರು ಮಾತ್ರ ಸಿಗುತ್ತಿದೆ. ಹೊಳೆಯಲ್ಲಿ ನೀರು ಸಿಗುವ ಪ್ರಮಾಣ ಕಡಿಮೆಯಾಗಿದ್ದರಿಂದ, ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಒಮ್ಮೆ ಅಡ್ಡ ಮಳೆಯಾದರೆ, ಗ್ರಾಮೀಣ ಜಲಮೂಲಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಗರದ ಯಾವುದೇ ಭಾಗದಲ್ಲಿ ಇನ್ನೂ ಟ್ಯಾಂಕರ್ ನೀರು ಪೂರೈಕೆಯ ಸಂದರ್ಭ ಎದುರಾಗಿಲ್ಲ. ಹೊಳೆಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿರುವುದರಿಂದ ನಗರದಲ್ಲಿರುವ 24ರಷ್ಟು ಸರ್ಕಾರಿ ಬಾವಿ, ಒಂಬತ್ತು ಬೋರ್‌ವೆಲ್‌ಗಳನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಅಗತ್ಯವಿದ್ದಲ್ಲಿ ಈ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.