ADVERTISEMENT

ಮುಂಡಿಗೆಕೆರೆಯಲ್ಲಿ ಬೆಳ್ಳಕ್ಕಿ ಪರಿವಾರ ವೃದ್ಧಿ

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 15:38 IST
Last Updated 1 ಆಗಸ್ಟ್ 2022, 15:38 IST
ಶಿರಸಿ ತಾಲ್ಲೂಕಿನ ಮುಂಡಿಗೆಕೆರೆಯಲ್ಲಿ ನೆಲೆ ನಿಂತಿರುವ ಬೆಳ್ಳಕ್ಕಿ ಹಿಂಡು.
ಶಿರಸಿ ತಾಲ್ಲೂಕಿನ ಮುಂಡಿಗೆಕೆರೆಯಲ್ಲಿ ನೆಲೆ ನಿಂತಿರುವ ಬೆಳ್ಳಕ್ಕಿ ಹಿಂಡು.   

ಶಿರಸಿ: ತಾಲ್ಲೂಕಿನ ಸೋಂದಾ ಸಮೀಪದ ಮುಂಡಿಗೆಕೆರೆ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿರುವ ಪರಿಣಾಮ ಬೆಳ್ಳಕ್ಕಿಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿದೆ. ಇದರಿಂದ ಪ್ರತಿ ವರ್ಷಕ್ಕಿಂತ ಹಕ್ಕಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ.

ಸುಧಾಪುರ ಕ್ಷೇತ್ರದಲ್ಲಿರುವ ಮುಂಡಿಗೆಕೆರೆ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಬೆಳ್ಳಕ್ಕಿಗಳ ಆಗಮನದಿಂದ ಪಕ್ಷಿಧಾಮವಾಗಿ ಮಾರ್ಪಡುತ್ತದೆ. ಸುಮಾರು 4.1 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಸಾವಿರಾರು ಬೆಳ್ಳಕ್ಕಿಗಳು ನೆಲೆನಿಂತು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.

ಆಳೆತ್ತರದ ಮುಂಡಿಗೆ ಸಸಿಗಳ ಪೊದೆಗಳಲ್ಲಿ ಗೂಡು ಕಟ್ಟಿ ಮರಿ ಮಾಡುವ ಹಕ್ಕಿಗಳಿಗೆ ಹೆಚ್ಚು ಮಳೆ ಅಗತ್ಯವಿದೆ ಎಂಬುದು ಪಕ್ಷಿತಜ್ಞರ ಅಭಿಪ್ರಾಯ.

ADVERTISEMENT

‘ಈ ಬಾರಿ ಜುಲೈ ತಿಂಗಳಿನಲ್ಲಿ ಸುರಿದ ಮಳೆ ಈಚಿನ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿತ್ತು. ಈ ಕಾರಣದಿಂದ ಬೆಳ್ಳಕ್ಕಿಗಳಿಗೆ ಹೆಚ್ಚು ಅನುಕೂಲವಾಗಿದೆ. ಪ್ರತಿ ಬಾರಿ 130 ರಿಂದ 150 ಗೂಡುಗಳು ಕಾಣಸಿಗುತ್ತಿದ್ದವು. ಈ ವರ್ಷ ಈಗಾಗಲೆ 180ಕ್ಕೂ ಹೆಚ್ಚು ಗೂಡುಗಳನ್ನು ಗುರುತಿಸಿದ್ದೇವೆ’ ಎನ್ನುತ್ತಾರೆ ಸೋಂದಾ ಜಾಗೃತಿ ವೇದಿಕೆ ಪ್ರಮುಖ ರತ್ನಾಕರ ಹೆಗಡೆ ಬಾಡಲಕೊಪ್ಪ.

‘ಜಾಗೃತ ವೇದಿಕೆಯಿಂದ ಪ್ರತಿ ವರ್ಷ ಮಳೆಯ ಪ್ರಮಾಣ ದಾಖಲಿಸಲಾಗುತ್ತದೆ. 2019ರಲ್ಲಿ ಜುಲೈ ತಿಂಗಳೊಂದರಲ್ಲೇ 86.9 ಸೆಂ.ಮೀ., 2020ರಲ್ಲಿ 54.5 ಸೆಂ.ಮೀ., 2021ರಲ್ಲಿ 97.6 ಸೆಂ.ಮೀ. ಮಳೆ ಸುರಿದಿತ್ತು. ಈ ಬಾರಿ 105.7 ಸೆಂ.ಮೀ. ಮಳೆ ಸುರಿದಿದೆ’ ಎಂದು ತಿಳಿಸಿದರು.

‘ಮೇ ಅಂತ್ಯದಿಂದ ಜೂನ್‍ವರೆಗೆ ಮೂರು ಹಂತದಲ್ಲಿ ಬೆಳ್ಳಕ್ಕಿಗಳ ಹಿಂಡು ಆಗಮಿಸಿದೆ. ಒಮದೂವರೆ ಸಾವಿರದಷ್ಟಿದ್ದ ಹಕ್ಕಿಗಳ ಸಂಖ್ಯೆ 1800 ದಾಟಿದೆ. ಮರಿಗಳು ಬೆಳವಣಿಗೆ ಕಾಣಿಸಿದ ನಂತರ ಇದು ಇನ್ನಷ್ಟು ವೃದ್ಧಿಸಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.