ADVERTISEMENT

ಜೊಯಿಡಾದಲ್ಲಿ ಕಾಣಿಸಿದ ಅಪರೂಪದ ಗೂಬೆಯ ರಕ್ಷಣೆ

ಜಿಲ್ಲೆಯ ವಿವಿಧೆಡೆ ಭಾರಿ ಗಾತ್ರದ ಹಾವುಗಳ ಕಾಪಾಡಿದ ಉರಗಪ್ರಿಯರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 16:35 IST
Last Updated 7 ಜನವರಿ 2021, 16:35 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ಕಾಗೆಗಳ ದಾಳಿಗೆ ಒಳಗಾಗಿದ್ದ, ಅಪರೂಪದ ‘ಶ್ರೀಲಂಕನ್ ಬೇ’ ಪ್ರಭೇದದ ಗೂಬೆ. ಚಿತ್ರ: ಪ್ರಕಾಶ ಹೊನ್ನಕೋರೆ.
ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ಕಾಗೆಗಳ ದಾಳಿಗೆ ಒಳಗಾಗಿದ್ದ, ಅಪರೂಪದ ‘ಶ್ರೀಲಂಕನ್ ಬೇ’ ಪ್ರಭೇದದ ಗೂಬೆ. ಚಿತ್ರ: ಪ್ರಕಾಶ ಹೊನ್ನಕೋರೆ.   

ಕಾರವಾರ: ಜಿಲ್ಲೆಯ ವಿವಿಧೆಡೆ ಮೂರು ದಿನಗಳಿಂದ ಕಾಳಿಂಗ ಸರ್ಪ, ಹೆಬ್ಬಾವು ಹಾಗೂ ಅಪರೂಪದ ‘ಶ್ರೀಲಂಕಾ ಕೊಲ್ಲಿಯ ಗೂಬೆ’ಯ (ಶ್ರೀಲಂಕನ್ ಬೇ ಓವ್ಲ್) ರಕ್ಷಣೆ ಮಾಡಲಾಗಿದೆ. ಜನವಸತಿಯತ್ತ ಬಂದಿದ್ದ ಅವುಗಳನ್ನು ವನ್ಯಜೀವಿ ಪ್ರಿಯರು ಮತ್ತು ತಜ್ಞರು ಸುರಕ್ಷಿತವಾಗಿ ಹಿಡಿದು ಪುನಃ ಕಾಡಿಗೆ ಬಿಟ್ಟಿದ್ದಾರೆ.

ಶ್ರೀಲಂಕನ್ ಬೇ ಓವ್ಲ್: ಪಶ್ಚಿಮ ಘಟ್ಟದ ಕೇಂದ್ರ ಭಾಗದಲ್ಲಿ ಅತ್ಯಂತ ಅಪರೂಪಕ್ಕೆ ಕಾಣಿಸಿಕೊಳ್ಳುವ ಈ ಪ್ರಭೇದದ ಗೂಬೆಯೊಂದು ಈಚೆಗೆ ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ಕಾಣಿಸಿಕೊಂಡಿತ್ತು. ಇಲ್ಲಿನ ಶಾಲೆಯ ಬಳಿ ಮಧ್ಯಾಹ್ನ ಬಂದಿದ್ದ ಅದರ ಮೇಲೆ ಕಾಗೆಗಳು ದಾಳಿ ಮಾಡುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು, ಕಾಳಿ ಹುಲಿ ಸಂರಕ್ಷಿತ ಪ್ರದೇಶದವನ್ಯಜೀವಿ ವಲಯದ ಅರಣ್ಯ ರಕ್ಷಕ ಪ್ರಕಾಶ ಹೊನ್ನಕೋರೆ ಅವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಹೋದ ಪ್ರಕಾಶ ಅವರು, ಅದನ್ನು ಹಿಡಿದು ಕಳ್ಳಬೇಟೆ ತಡೆ ಶಿಬಿರದ (ಎ.ಪಿ.ಸಿ) ಬಳಿ ಪುನಃ ಕಾಡಿಗೆ ಹಾರಿಸಿದರು. ಈ ಪ್ರಭೇದದ ಗೂಬೆಗಳು ಶ್ರೀಲಂಕಾದಲ್ಲಿ ವಿನಾಶದ ಅಂಚಿನಲ್ಲಿವೆ. ಅಪರೂಪಕ್ಕೆ ಕೇರಳ ಮತ್ತು ಗೋವಾ ಭಾಗದಲ್ಲೂ ಕಾಣಿಸಿಕೊಳ್ಳುತ್ತವೆ. ಈ ಭಾಗದಲ್ಲಿ ವಿರಳವಾಗಿವೆ ಎಂದು ಮಾಹಿತಿ ನೀಡಿದರು.

ADVERTISEMENT

ಬೃಹತ್ ಹೆಬ್ಬಾವು ರಕ್ಷಣೆ: ಕಾರವಾರದ ಬಾಡ ಐ.ಟಿ.ಐ ಕಾಲೇಜು ಬಳಿ ಗಟಾರದಲ್ಲಿ ಕಂಡು ಬಂದ ಭಾರಿ ಗಾತ್ರ ಹೆಬ್ಬಾವನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

14 ಅಡಿಗೂ ಉದ್ದ ಹಾಗೂ ಅಂದಾಜು 70 ಕೆ.ಜಿ ತೂಕವಿದ್ದ ಹಾವನ್ನು ಒಮ್ಮೆ ಹಿಡಿಯಲಾಗಿತ್ತು. ಆದರೆ, ತಪ್ಪಿಸಿಕೊಂಡ ಹೆಬ್ಬಾವು ಪುನಃ ಗಟಾರಕ್ಕೆ ಇಳಿದಿತ್ತು. ಕೊನೆಗೆ ಭಾರಿ ಶ್ರಮಪಟ್ಟು ಹಿಡಿದು ಪ್ಲಾಸ್ಟಿಕ್ ಡ್ರಂನಲ್ಲಿ ತುಂಬಿಸಲಾಯಿತು. ಬಳಿಕ ಅದನ್ನು ಅಣಶಿ ಕಾಡಿನಲ್ಲಿ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ಎ.ಆರ್.ಎಫ್.ಒ ಹನುಮಂತ, ಅರಣ್ಯ ರಕ್ಷಕ ಗೋಪಾಲ ನಾಯ್ಕ, ವಾಚರ್ ಸಂಜೀವ ಹಾಗೂ ನೀಲೇಶ ಮತ್ತು ಸ್ಥಳೀಯರು ಭಾಗಿಯಾಗಿದ್ದರು.

ಈ ಭಾಗದಲ್ಲಿ ಕೆಲವು ದಿನಗಳಿಂದ ಎರಡು ಮೂರು ಹೆಬ್ಬಾವುಗಳನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಳಿಂಗ ಸರ್ಪ ಸುರಕ್ಷಿತ: ಕುಮಟಾ ತಾಲ್ಲೂಕಿನ ಉಳ್ಳೂರುಮಠದ ಕೃಷ್ಣ ನಾಯ್ಕ ಎಂಬುವರ ಮನೆ ಬಳಿ ಮಂಗಳವಾರ ಕಾಣಿಸಿಕೊಂಡಿದ್ದ ಸುಮಾರು 14 ಅಡಿ ಉದ್ದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಪವನ್ ನಾಯ್ಕ ಅವರು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಈ ವೇಳೆ ಮಾತನಾಡಿದ ಪವನ್ ನಾಯ್ಕ, ‘ಕಾಳಿಂಗ ಸರ್ಪವು ಸಣ್ಣಪುಟ ವಿಷಕಾರಿ ಹಾವು, ಕೀಟ ಮುಂತಾದವುಗಳನ್ನು ತಿನ್ನುವ ಮೂಲಕ ಮನುಷ್ಯನಿಗೆ ಉಪಕಾರಿಯಾಗಿದೆ. ಆದ್ದರಿಂದ ಕಾಳಿಂಗ ಸರ್ಪ ಕಂಡರೆ ಅದನ್ನು ಕೊಲ್ಲದೆ, ತಕ್ಷಣ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ’ ಎಂದು ಸ್ಥಳೀಯರಿಗೆ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.