ಕಾರವಾರ: ಪ್ರಾಕೃತಿಕವಾಗಿ ಸಂಪದ್ಭರಿತವಾಗಿರುವ ಜೊಯಿಡಾ ಕಾಡು ಅಣಬೆಗಳ ಕಣಜವೂ ಹೌದು. ಮಳೆಗಾಲದ ಆರಂಭದಿಂದ ಕೊನೆಯವರೆಗೆ ಇಲ್ಲಿನ ನೆಲದಲ್ಲಿ ಬೆಳೆಯುವ ಅಣಬೆಗಳು ಜನರ ಆಹಾರವಾಗುವ ಜೊತೆಗೆ ಜೀವನೋಪಾಯಕ್ಕೂ ದಾರಿ ಮಾಡಿಕೊಡುತ್ತಿವೆ.
ಮುಂಗಾರು ಆರಂಭದಲ್ಲಿ ರಭಸದ ಮಳೆಯ ನಡುವೆ ಇಣುಕುವ ಬಿಸಿಲು ಕಾಡಿನಲ್ಲಿ ಅಸಂಖ್ಯ ಅಣಬೆಗಳು ಹುಟ್ಟಲು ಅನುಕೂಲ ಮಾಡಿಕೊಡುತ್ತಿದೆ. ಜಿಲ್ಲೆಯ ವಿವಿಧೆಡೆ ಮೊದಲ ಮಳೆಗೆ ಕಾಡು, ಬೆಟ್ಟಗಳಲ್ಲಿ ಮೊಳಕೆಯೊಡೆದ ಅಣಬೆಗಳಿಗೆ ಹುಡುಕಾಟ ನಡೆದಿದೆ. ಜೊಯಿಡಾದ ಮಾರುಕಟ್ಟೆಗಳಲ್ಲಿ ‘ಪಾವಾ’ ಹೆಸರಿನ ಕಾಡು ಅಣಬೆಗಳನ್ನು ಮಾರಾಟಕ್ಕಿಟ್ಟು ಕುಳಿತ ಹಳ್ಳಿಗರ ತಂಡೋಪತಂಡವೇ ಕಾಣಸಿಗುತ್ತಿದೆ.
ಬುಟ್ಟಿಗಳಲ್ಲಿ ಅಣಬೆಗಳನ್ನು ಹೊತ್ತು ತರುವ ಜೊಯಿಡಾದ ಹಳ್ಳಿಗಳ ಜನರು ರಾಶಿ ಲೆಕ್ಕದಲ್ಲಿ ಅವುಗಳನ್ನು ಮಾರಾಟ ಮಾಡಿ ಬಂದ ಆದಾಯದಲ್ಲಿ ದಿನಸಿ ಸಾಮಗ್ರಿ ಕೊಂಡೊಯ್ಯುತ್ತಾರೆ. ಮಳೆಗಾಲದ ಆರಂಭದಲ್ಲಿ ಹೇರಳವಾಗಿ ದೊರೆಯುವ ಪಾವಾ ತಳಿಯ ಕಾಡು ಅಣಬೆಗಳು ನೂರಾರು ಜನರಿಗೆ ಉಪ ಆದಾಯಕ್ಕೆ ದಾರಿ ಮಾಡಿಕೊಟ್ಟಿದೆ.
‘ಮಳೆಯ ಆರಂಭದಲ್ಲಿ ಅಣಶಿ, ಕುಂಡಲ, ನುಜ್ಜಿ ಭಾಗದ ಕಾಡಿನಲ್ಲಿನ ಪಾವಾ ಹೆಸರಿನ ಮರಗಳ ಕೆಳಗೆ ಕಾಡು ಅಣಬೆಗಳು ಮೊಳೆಯುತ್ತವೆ. ನೆತ್ತಿಯ ಮೇಲೆ ಕಡುಗೆಂಪು ಬಣ್ಣದ ಪದರು ಹೊಂದಿರುವ ಇವು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. ಮನೆ ಬಳಕೆಗೆ ಒಂದಷ್ಟು ಇರಿಸಿಕೊಂಡು ಉಳಿದವನ್ನು ಪೇಟೆ ಅಥವಾ ಹೆದ್ದಾರಿ ಬದಿಯಲ್ಲಿ ನಿಂತು ಮಾರಾಟ ಮಾಡುತ್ತೇವೆ. ಪ್ರತಿ ರಾಶಿಗೆ ₹50 ರಿಂದ ₹60 ದರಕ್ಕೆ ಮಾರುತ್ತೇವೆ’ ಎಂದು ಅಣಶಿಯ ಜ್ಯೋತಿ ಮಿರಾಶಿ ಹೇಳಿದರು.
‘ಮಳೆಗಾಲದ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೂ ಜೊಯಿಡಾ ಭಾಗದಲ್ಲಿ ನಾನಾ ವಿಧದ ಅಣಬೆಗಳು ಮೊಳಕೆಯೊಡೆಯುತ್ತವೆ. ಅವುಗಳಲ್ಲಿ ಪಾವಾ, ಶೃಂಗಾರ, ಚೋಚಯಾಲಿ, ರವಣಾ, ಕುಟಾಳಿ, ಕಾನ್, ಫಿಡಗಾ ತಳಿಯ ಕಾಡು ಅಣಬೆಗಳನ್ನು ಆಹಾರವಾಗಿ ಸ್ಥಳೀಯರು ಬಳಸುತ್ತಾರೆ. ಜೊಯಿಡಾ– ಗೋವಾ ಗಡಿಭಾಗದ ಕಾಡುಗಳಲ್ಲಿ ಹೆಚ್ಚು ಸಿಗುವ ಪಾವಾ ಅಣಬೆಗಳಿಗೆ ಬೇಡಿಕೆಯೂ ಹೆಚ್ಚು. ಇವುಗಳು ಹೇರಳವಾಗಿ ಸಿಗುವ ಕಾರಣದಿಂದ ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ಕುಣಬಿ ಸಮಾಜದ ಮುಖಂಡ ಜಯಾನಂದ ಡೇರೆಕರ.
‘ಹುತ್ತದ ಮೇಲೆ ಬೆಳೆಯುವ ರವಣಾ ಅಣಬೆ ಮಳೆಗಾಲದ ಮಧ್ಯಂತರದಲ್ಲಿ ಸಿಗುತ್ತದೆ. ಆದರೆ ಗಣೇಶ ಚತುರ್ಥಿ ಬಳಿಕ ಇವುಗಳನ್ನು ಸೇವಿಸುವುದು ಕಡಿಮೆ. ಇದಕ್ಕೆ ಸಾಂಪ್ರದಾಯಿಕ ಕಾರಣಗಳು ಇವೆ. ಕಿವಿ ಆಕಾರ ಹೋಲುವ ಕಾನ್, ಔಷಧದ ಗುಣ ಉಳ್ಳ ಕುಟಾಳಿ, ಅತ್ಯಾಕರ್ಷಕವಾಗಿ ಕಾಣುವ ಶೃಂಗಾರ ಅಣಬೆಗಳು ಮಳೆಗಾಲದ ಮಧ್ಯಂತರ ಅವಧಿಯಿಂದ ಕೊನೆಯವರೆಗೂ ದೊರೆಯುತ್ತವೆ’ ಎಂದು ವಿವರಿಸಿದರು.
ಕಾಡು ಅಣಬೆಗಳು ಉಷ್ಣ ಗುಣ ಹೊಂದಿರುವ ಕಾರಣ ಮಳೆಗಾಲದ ತಂಪು ವಾತಾವರಣದಲ್ಲಿ ಇವುಗಳ ಸೇವನೆಯಿಂದ ಆರೋಗ್ಯ ಕಾಪಿಟ್ಟುಕೊಳ್ಳಬಹುದುಜಯಾನಂದ ಡೇರೆಕರ ಕುಣಬಿ ಸಮಾಜದ ಮುಖಂಡ
ವಿರಳವಾಗುತ್ತಿರುವ ಕಾಡು ಅಣಬೆ!
ಜೊಯಿಡಾ ಮಾತ್ರವಲ್ಲದೆ ಮಲೆನಾಡು ಭಾಗದಲ್ಲಿಯೂ ಕಾಡು ಅಣಬೆಗಳು ಹೆಚ್ಚಿನ ಪ್ರಮಾಣದಲ್ಲಿ ಮೊಳಕೆಯೊಡೆಯುತ್ತವೆ. ಶಿರಸಿ ಕುಮಟಾ ಸಿದ್ದಾಪುರ ಭಾಗಗಳಲ್ಲಿ ಬಿಳಿ ಅಣಬೆ ಕಪ್ಪು ಅಣಬೆಗಳಿಗೆ ಮಳೆಗಾಲದಲ್ಲಿ ಹೆಚ್ಚಿನ ಬೇಡಿಕೆಯೂ ಇದೆ. ಆದರೆ ಈಚಿನ ವರ್ಷದಲ್ಲಿ ಅಣಬೆಗಳ ಲಭ್ಯತೆ ಅಪರೂಪ ಎಂಬಂತಾಗಿದೆ. ‘ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ಕಾರಣದಿಂದ ಕಾಡು ಅಣಬೆಗಳು ಬೆಳೆಯಲು ಪೂರಕ ಪೋಷಕಾಂಶ ಮಣ್ಣಿನಲ್ಲಿ ಕಡಿಮೆ ಆಗುತ್ತಿದೆ. ಇದರಿಂದ ಅವು ವಿರಳವಾಗುತ್ತಿದೆ’ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.