ADVERTISEMENT

ಉದ್ಯೋಗ ಬಿಟ್ಟು ಆಟೊ ಏರಿದ ಮಹಿಳೆ

ಸ್ವಾವಲಂಬನೆ ಹಾದಿಯಲ್ಲಿ ಭಟ್ಕಳ ತಾಲ್ಲೂಕು ತೇರ್ನಮಕ್ಕಿಯ ಮಹಾದೇವಿ ನಾಯ್ಕ

ಗಣಪತಿ ಹೆಗಡೆ
Published 23 ಜನವರಿ 2023, 15:52 IST
Last Updated 23 ಜನವರಿ 2023, 15:52 IST
ಆಟೊ ಚಾಲನೆಗೆ ಸಿದ್ಧಗೊಂಡು ನಿಂತಿರುವ ಭಟ್ಕಳ ತಾಲ್ಲೂಕಿನ ತೇರ್ನಮಕ್ಕಿಯ ಮಹಾದೇವಿ ಜನಾರ್ಧನ ನಾಯ್ಕ.
ಆಟೊ ಚಾಲನೆಗೆ ಸಿದ್ಧಗೊಂಡು ನಿಂತಿರುವ ಭಟ್ಕಳ ತಾಲ್ಲೂಕಿನ ತೇರ್ನಮಕ್ಕಿಯ ಮಹಾದೇವಿ ಜನಾರ್ಧನ ನಾಯ್ಕ.   

ಕಾರವಾರ: ‘ಹದಿನೈದು ವರ್ಷಗಳಿಂದ ಉದ್ಯೋಗದಲ್ಲಿದ್ದೆ. ಉತ್ತರ ಕರ್ನಾಟಕ ಭಾಗಕ್ಕೆ ವರ್ಗಾವಣೆ ಆದೇಶ ಸಿಕ್ಕಿದ್ದು ದಿಗಿಲು ಬಡಿಸಿತು. ಹೀಗಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಆಟೊ ಏರಿದ್ದೇನೆ’.

ಭಟ್ಕಳ ತಾಲ್ಲೂಕು ಮುರುಡೇಶ್ವರದ ಸಮೀಪದ ತೇರ್ನಮಕ್ಕಿ ಗ್ರಾಮದ ಬಳಿ ಆಟೊ ನಿಲ್ದಾಣದಲ್ಲಿ ಖಾಕಿ ಬಣ್ಣದ ಕೋಟು ಧರಿಸಿ ಆಟೊ ಎದುರು ನಿಂತಿದ್ದ ಮಹಿಳೆ ಮಹಾದೇವಿ ಜನಾರ್ಧನ ನಾಯ್ಕ ಸ್ವಲ್ಪವೂ ವಿಚಲಿತಗೊಳ್ಳದೆ ಮಾತನಾಡಿದ್ದು ಹೀಗೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಅವರನ್ನು ಸಂಸ್ಥೆ ವರ್ಗಾವಣೆ ಮಾಡಿತ್ತು. ಇಬ್ಬರು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಬಯಲು ಸೀಮೆಯಲ್ಲಿ ಕೆಲಸ ಮಾಡುವುದು ಕಷ್ಟ ಎಂದು ಅರಿತ ಮಹಾದೇವಿ ಕೆಲಸ ಬಿಟ್ಟಿದ್ದರು. ದುಡಿಮೆ ಮಾಡಿಯೇ ಬದುಕು ಕಟ್ಟಿಕೊಂಡ ಬಡ ಮಧ್ಯಮ ವರ್ಗದ ಕುಟುಂಬದ ಮಹಾದೇವಿ ಹೊತ್ತಿನ ಊಟಕ್ಕೆ ಆದಾಯ ಗಳಿಸಲು ಆಟೊ ಚಾಲನೆ ವೃತ್ತಿ ಆಯ್ದುಕೊಂಡರು.

ADVERTISEMENT

ಕಳೆದ ಒಂದು ವಾರದಿಂದ ತೇರ್ನಮಕ್ಕಿ ಆಟೊ ನಿಲ್ದಾಣದಲ್ಲಿ ಅವರ ಆಟೊ ನಿಲುಗಡೆಯಾಗುತ್ತಿದೆ. ಬಸ್ತಿ, ಹೆರಾಡಿ, ಮುರುಡೇಶ್ವರ ಭಾಗಕ್ಕೆ ಜನರನ್ನು ಕರೆದೊಯ್ಯಲು ಆರಂಭಿಸಿದ್ದಾರೆ. ಮಹಿಳೆಯೊಬ್ಬರು ಆಟೊ ಚಾಲನೆ ಮಾಡುತ್ತ ಸಾಗುತ್ತಿರುವುದನ್ನು ಕಂಡು ಈ ಭಾಗದ ಜನರು ಅಚ್ಚರಿಗೊಂಡಿದ್ದಾರೆ.

‘ಉದ್ಯೋಗದ ಆದಾಯ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಪತಿ ಕುಮಟಾದ ಖಾಸಗಿ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ಐದು ವರ್ಷ, ಎರಡೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದೇನೆ’ ಎಂದು ಮಹಾದೇವಿ ಪರಿಚಯ ಹೇಳಿಕೊಂಡರು.

‘ಕೆಲಸ ಬಿಟ್ಟ ಬಳಿಕ ಕೆಲ ದಿನ ಮನೆಯಲ್ಲೇ ಖಾಲಿ ಕುಳಿತೆ. ಆಟೊ ಚಾಲನೆ ಮಾಡಬಹುದು ಎಂಬ ಆಲೋಚನೆ ಒಮ್ಮೆ ಬಂತು. ಅದನ್ನೇ ದೃಢವಾಗಿಸಿಕೊಂಡು ಸವಾಲಿನ ವೃತ್ತಿಯನ್ನು ಆಯ್ದುಕೊಳ್ಳಲು ಮುಂದಾದೆ. ಸಂಬಳದಲ್ಲಿ ಉಳಿಕೆ ಮಾಡಿಟ್ಟುಕೊಂಡಿದ್ದ ₹80 ಸಾವಿರದಲ್ಲಿ ಹಳೆಯ ಆಟೊ ಖರೀದಿ ಮಾಡಿದೆ’ ಎಂದು ವಿವರಿಸಿದರು.

ದುಡಿಮೆಗಾಗಿ ತರಬೇತಿ:

‘ಆಟೊ ಚಾಲನೆ ಮಾಡಿ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ ಮರುದಿನವೇ ಕುಮಟಾದಲ್ಲಿ ಕಾರು ಚಾಲನಾ ತರಬೇತಿಗೆ ಸೇರಿಕೊಂಡೆ. ಕಾರು ಚಾಲನೆಯ ಜತೆಗೆ ನಾಗೇಶ ನಾಯ್ಕ ಎಂಬುವವರಿಂದ ಆಟೊ ಚಾಲನೆಯ ಕುರಿತಾಗಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. ಪತಿ ಜನಾರ್ಧನ ನಾಯ್ಕ ಆಟೊ ಚಾಲನೆ ವೃತ್ತಿ ಆಯ್ದುಕೊಳ್ಳಲು ಸಹಮತಿಸಿ ಬೆಂಬಲಿಸಿದರು’ ಎನ್ನುತ್ತಾರೆ ಮಹಾದೇವಿ ನಾಯ್ಕ.

‘ಪುರುಷರೇ ತುಂಬಿರುತ್ತಿದ್ದ ಆಟೊ ನಿಲ್ದಾಣದಲ್ಲಿ ಒಬ್ಬಳೇ ನಿಲ್ಲಲ್ಲು ಮುಜುಗರವಾಗುತ್ತಿತ್ತು. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದು ವಿಶ್ವಾಸ ತುಂಬಿದೆ. ಇತರ ಮಹಿಳೆಯರಿಗೂ ಸ್ಫೂರ್ತಿಯಾಗಬೇಕು ಎಂಬುದು ನನ್ನ ಗುರಿ’ ಎಂದರು.

------------------

ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನೆಲೆಗೆ ಬರುತ್ತಿದ್ದಾರೆ. ಆಟೊ ಚಾಲನೆಯಲ್ಲೂ ಹಿಂದೆ ಬೀಳಬಾರದು. ಪ್ರಾಮಾಣಿಕವಾಗಿ ಜೀವನ ಕಟ್ಟಿಕೊಳ್ಳಲು ಇದೂ ಒಂದು ಮಾರ್ಗ.

ಮಹಾದೇವಿ ನಾಯ್ಕ

ಆಟೊ ಚಾಲಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.