ಕಾರವಾರ: ನಗರದ ಕಳಸವಾಡದಲ್ಲಿ ಗುರುವಾರ ಬೆಳಗಿನ ಜಾವ, ಕುಡಿಯಲು ಸಾರಾಯಿ ತಂದು ಕೊಡುವ ವಿಚಾರದಲ್ಲಿ ಶುರುವಾದ ಜಗಳವು ಮಹಿಳೆಯ ಸಾವಿಗೆ ಕಾರಣವಾಗಿದೆ.
ಶಾಂತಾ ಗೌಡ (43) ಮೃತ ಮಹಿಳೆ. ಮೂಲತಃ ಗಜೇಂದ್ರಗಡದ ಅವರು, ಕಾರವಾರದ ಕಳಸವಾಡದಲ್ಲಿ ಹನುಮಂತ ಮನವೆಲ್ ಸಿದ್ದಿ (45) ಎಂಬುವವರೊಂದಿಗೆ ವಾಸವಿದ್ದರು. ಆರೋಪಿ ಹನುಮಂತಮುಂಡಗೋಡದ ಹನುಮಾಪುರ ನಿವಾಸಿಯಾಗಿದ್ದು, ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.
‘ಬೆಳಗಿನ ಜಾವ 4.30ರ ಸುಮಾರಿಗೆ ತನಗೆ ಸಾರಾಯಿ ತಂದುಕೊಡುವಂತೆ ಶಾಂತಾ ಗೌಡ ಕೇಳಿ, ಆರೋಪಿಯ ಅಂಗಿ ಹಿಡಿದು ಎಳೆದರು. ಇದರಿಂದ ಸಿಟ್ಟಾದ ಆರೋಪಿಯು, ಮಹಿಳೆಯನ್ನು ಕುತ್ತಿಗೆ ಹಿಡಿದು ದೂಡಿದರು. ಆ ರಭಸಕ್ಕೆ ಆಕೆ ಮನೆಯ ಬಾಗಿಲಿನ ಮೆಟ್ಟಿಲಿನ ಮೇಲೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರವಾದ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ತಪ್ಪಿಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ತನಿಖೆ ಕೈಗೊಂಡಿರುವ ಪಿ.ಎಸ್.ಐ ಸಂತೋಷಕುಮಾರ್.ಎಂ ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.