ADVERTISEMENT

‘ಮಣ್ಣು, ನೀರಿನ ಕ್ರಮಬದ್ಧ ಸಂರಕ್ಷಣೆ ಅಗತ್ಯ’

‘ಜಲ ಸಂಜೀವಿನಿ’ ಕಾರ್ಯಾಗಾರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 15:18 IST
Last Updated 7 ನವೆಂಬರ್ 2022, 15:18 IST
ಉದ್ಯೋಗ ಖಾತ್ರಿ ಯೋಜನೆಯಡಿ ‘ಜಲ ಸಂಜೀವಿನಿ– ವೈಜ್ಞಾನಿಕ ಕ್ರಿಯಾ ಯೋಜನೆ ತಯಾರಿ’ ಕುರಿತು ಕಾರವಾರದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಲಪ್ಪನವರ ಆನಂದಕುಮಾರ ಉದ್ಘಾಟಿಸಿದರು
ಉದ್ಯೋಗ ಖಾತ್ರಿ ಯೋಜನೆಯಡಿ ‘ಜಲ ಸಂಜೀವಿನಿ– ವೈಜ್ಞಾನಿಕ ಕ್ರಿಯಾ ಯೋಜನೆ ತಯಾರಿ’ ಕುರಿತು ಕಾರವಾರದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಲಪ್ಪನವರ ಆನಂದಕುಮಾರ ಉದ್ಘಾಟಿಸಿದರು   

ಕಾರವಾರ: ‘ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ಮಣ್ಣು, ನೀರು ಹಾಗೂ ಪರಿಸರವನ್ನು ಕ್ರಮಬದ್ಧವಾಗಿ ಸಂರಕ್ಷಿಸುವುದು ಅಗತ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಲಪ್ಪನವರ ಆನಂದಕುಮಾರ ಅಭಿಪ್ರಾಯಪಟ್ಟರು.

ಉದ್ಯೋಗ ಖಾತ್ರಿ ಯೋಜನೆಯಡಿ ‘ಜಲ ಸಂಜೀವಿನಿ– ವೈಜ್ಞಾನಿಕ ಕ್ರಿಯಾ ಯೋಜನೆ ತಯಾರಿ’ ಕುರಿತುನಗರದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ಗುಡ್ಡಗಾಡು ಪ್ರದೇಶದಿಂದ ಹರಿದು ಹೋಗುವ ನೀರನ್ನು ಜಿಯೊಸ್ಪೇಷಿಯಲ್ ತಂತ್ರಜ್ಞಾನ ಬಳಸಿ ತಡೆದು ಅಂತರ್ಜಲ ಮಟ್ಟ ಹೆಚ್ಚಿಸುವುದು, ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಡೆಯುವುದು, ಸಮರ್ಪಕವಾಗಿ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಜಲ ಸಂಜೀವಿನಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಉದ್ಯೋಗ ಖಾತ್ರಿಯಡಿ ಮುಂದಿನ ಮೂರು ವರ್ಷಗಳಿಗೆ ವೈಜ್ಞಾನಿಕ ಕ್ರಮಗಳನ್ನು ಆಧರಿಸಿ ನೀರು, ನೆಲ ಹಾಗೂ ಪರಿಸರವನ್ನು ಸಂರಕ್ಷಿಸುವ ಅಗತ್ಯವಿದೆ. ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ವ್ಯಕ್ತಿ ಅನಿಲ್.ಆರ್. ನಾಯ್ಕ ಮಾತನಾಡಿ, ‘ಉಪಗ್ರಹ, ರಿಮೋಟ್ ಸೆನ್ಸಿಂಗ್, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿ.ಪಿ.ಎಸ್) ಮೂಲಕ ಭೂಮಿಯ ರಚನೆಯ ವಿನ್ಯಾಸ ಹಾಗೂ ನೀರಿನ ಮೂಲವನ್ನು ಗುರುತಿಸಬೇಕು. ಉದ್ಯೋಗ ಖಾತ್ರಿಯಡಿ ವಿವಿಧ ಜಲ ಸಂರಕ್ಷಣಾ ಕಾಮಗಾರಿಗಳನ್ನು ಆಯ್ಕೆ ಮಾಡಬೇಕು. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿಗಳು ಸಾಮೂಹಿಕವಾಗಿ ಚರ್ಚಿಸಿ
ವೈಜ್ಞಾನಿಕ ಕ್ರಮದಲ್ಲಿ ಕಾಮಗಾರಿಗಳ ರೂಪರೇಷೆಗಳನ್ನು ತಯಾರಿಸಬೇಕು’ ಎಂದು ಹೇಳಿದರು.

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರಾಮದಾಸ ನಾಯ್ಕ, ವ್ಯವಸ್ಥಾಪಕಿ ಅನಿತಾ ಬಂಡಿಕಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.