ADVERTISEMENT

ಕಾರವಾರ: ಚೇತರಿಕೆಯ ಹಾದಿಯಲ್ಲಿ ಆತಿಥ್ಯ ವಲಯ

ಪ್ರವಾಸೋದ್ಯಮ ದಿನ: ಕೋವಿಡ್‌ಗೂ ಪೂರ್ವದ ವರ್ಷಗಳಷ್ಟಾದ ಪ್ರವಾಸಿಗರ ಸಂಖ್ಯೆ

ಸದಾಶಿವ ಎಂ.ಎಸ್‌.
Published 26 ಸೆಪ್ಟೆಂಬರ್ 2022, 20:30 IST
Last Updated 26 ಸೆಪ್ಟೆಂಬರ್ 2022, 20:30 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು (ಸಂಗ್ರಹ ಚಿತ್ರ)
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು (ಸಂಗ್ರಹ ಚಿತ್ರ)   

ಕಾರವಾರ: ಎರಡು ವರ್ಷಗಳಿಂದ ಕೋವಿಡ್‌ನಿಂದ ಕಂಗೆಟ್ಟಿದ್ದ ಪ್ರವಾಸೋದ್ಯಮ ವಲಯವು, ಈ ವರ್ಷ ಚೇತರಿಕೆಯ ಹಾದಿಯಲ್ಲಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ.

ಈ ವರ್ಷ ಆಗಸ್ಟ್‌ವರೆಗೆ, ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯು ಕೋವಿಡ್ ಪೂರ್ವದಲ್ಲಿ ಅಂದರೆ, 2019ರಲ್ಲಿ ಇಡೀ ವರ್ಷ ಬಂದಿರುವ ಪ್ರವಾಸಿಗರ ಸಂಖ್ಯೆಯ ಸಮೀಪದಲ್ಲಿದೆ.

ಉಳಿದ ನಾಲ್ಕು ತಿಂಗಳಲ್ಲಿ ಮಳೆಗಾಲ ಮುಗಿದು, ವಿವಿಧ ವಾರಾಂತ್ಯಗಳಲ್ಲಿ ಮತ್ತಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ದಸರಾ ರಜಾ ದಿನಗಳೂ ಇರುವ ಕಾರಣ ಅಕ್ಟೋಬರ್‌ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಬಹುದು. ಹಾಗಾಗಿ ಈ ವರ್ಷ ಭೇಟಿ ನೀಡಿದವರ ಒಟ್ಟು ಸಂಖ್ಯೆಯು ಅತಿ ಹೆಚ್ಚು ಆಗುವ ನಿರೀಕ್ಷೆಯಿದೆ.

ADVERTISEMENT

ಜಿಲ್ಲೆಯ ಗೋಕರ್ಣ, ಮುರುಡೇಶ್ವರ, ಕಾರವಾರದ ಕಡಲತೀರಗಳು, ಶಿರಸಿಯ ಮಾರಿಕಾಂಬಾ ದೇಗುಲ, ಯಲ್ಲಾಪುರದ ಸುತ್ತಮುತ್ತಲಿನ ಜಲಪಾತಗಳು, ದಾಂಡೇಲಿ, ಜೊಯಿಡಾ ತಾಲ್ಲೂಕುಗಳ ಹೋಮ್‌ ಸ್ಟೇಗಳು ಮತ್ತು ರೆಸಾರ್ಟ್‌ಗಳು, ಕಾಳಿ ನದಿಯಲ್ಲಿ ಸಾಹಸಕ್ರೀಡೆ, ಮುಂಡಗೋಡದ ಟಿಬೆಟನ್ ಕಾಲೊನಿಗಳು... ಹೀಗೆ ಜಿಲ್ಲೆಯಲ್ಲಿರುವ ಹತ್ತಾರು ತಾಣಗಳು ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತವೆ.

ಕೊರೊನಾ ವೈರಸ್ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿದ ಮಾದರಿಯಲ್ಲೇ ಉತ್ತರ ಕನ್ನಡದ ಪ್ರವಾಸೋದ್ಯಮವನ್ನು ಬುಡಮೇಲು ಮಾಡಿತ್ತು. ನಂತರದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕ ರೋಗವು ತನ್ನ ಹಿಡಿತವನ್ನು ಬಿಗಿಯಾಗಿಯೇ ಮುಂದುವರಿಸಿತ್ತು. ಇದರಿಂದ ಜಿಲ್ಲೆಯ ಆತಿಥ್ಯ ವಲಯವು ಕಂಗೆಟ್ಟಿತು. ಈ ವರ್ಷ ಪರಿಸ್ಥಿತಿ ಸುಧಾರಿಸಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.

ಅದರಲ್ಲೂ ಗೋಕರ್ಣದ ಕಡಲತೀರಗಳು ಹಾಗೂ ಮುರುಡೇಶ್ವರದ ಕಿನಾರೆ, ದೇವಸ್ಥಾನ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳಿಂದ ತಿಳಿಯುತ್ತದೆ.

2019ರಲ್ಲಿ 48.77 ಲಕ್ಷ ದೇಶೀಯ ಪ್ರವಾಸಿಗರು ಹಾಗೂ 16,446 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. 2020ರಲ್ಲಿ 22.71 ಲಕ್ಷ ದೇಶೀಯ ಪ್ರವಾಸಿಗರು ಮತ್ತು 3,507 ವಿದೇಶಿಯರು, 2021ರಲ್ಲಿ 34.20 ಲಕ್ಷ ದೇಶೀಯ ಪ್ರವಾಸಿಗರು ಬಂದಿದ್ದರೆ, 392 ವಿದೇಶಿ ಯಾತ್ರಿಕರು ಬಂದಿದ್ದರು.

ಈ ವರ್ಷ ಆಗಸ್ಟ್ ವೇಳೆಗೇ 58.54 ಲಕ್ಷ ದೇಶೀಯ ಪ್ರವಾಸಿಗರು ಮತ್ತು 3,867 ವಿದೇಶಿ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.