ADVERTISEMENT

ಮುಂಡಗೋಡ | ಹುಲಿದೇವರಿಗೆ ಮಧ್ಯರಾತ್ರಿ ನಿಶ್ಶಬ್ದ ಪೂಜೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:00 IST
Last Updated 22 ಅಕ್ಟೋಬರ್ 2025, 7:00 IST
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ಅರಣ್ಯಪ್ರದೇಶದಲ್ಲಿರುವ ಹುಲಿದೇವರಿಗೆ ಭಕ್ತರು ಸೋಮವಾರ ಮಧ್ಯರಾತ್ರಿ ತೆಂಗಿನಕಾಯಿ ಅರ್ಪಿಸಿದರು
ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ಅರಣ್ಯಪ್ರದೇಶದಲ್ಲಿರುವ ಹುಲಿದೇವರಿಗೆ ಭಕ್ತರು ಸೋಮವಾರ ಮಧ್ಯರಾತ್ರಿ ತೆಂಗಿನಕಾಯಿ ಅರ್ಪಿಸಿದರು   

ಮುಂಡಗೋಡ: ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದಿಂದ ಒಂದು ಕಿ.ಮೀ ಅಂತರದಲ್ಲಿ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ, ಸೋಮವಾರ ಮಧ್ಯರಾತ್ರಿ ಸಮಯದಲ್ಲಿ ನಿಶ್ಯಬ್ಧವಾಗಿ ಅರ್ಚಕರು ಹುಲಿ ದೇವರ ಪೂಜೆ ನೆರವೇರಿಸಿದರು.

ದೀಪಾವಳಿ ಅಮಾವಾಸ್ಯೆಯಂದು ಗ್ರಾಮಸ್ಥರು ಗೋವಿನ ಬಾಲಕ್ಕೊಂದು ತೆಂಗಿನಕಾಯಿ ಒಡೆಯುವ ಪದ್ಧತಿಯಂತೆ, ಸುಮಾರು 500ಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಹುಲಿದೇವರ ಕಟ್ಟೆಯಲ್ಲಿ ಒಡೆದು, ದೇವರಿಗೆ ಅರ್ಪಿಸಿದರು.

‘ಗಂಟೆಯ ನಾದವಿಲ್ಲದೇ, ಅರ್ಚಕರ ಮಂತ್ರವಿಲ್ಲದೇ, ನೆರೆದ ಭಕ್ತರ ಮಾತೂ ಸಹ ಇಲ್ಲದೇ ಹುಲಿದೇವರಿಗೆ ಒಂದು ಗಂಟೆ ಕಾಲ ಪೂಜೆ ಸಲ್ಲಿಸಲಾಯಿತು. ಹಿಂದಿನ ಕಾಲದಲ್ಲಿ ಕೊಟ್ಟಿಗೆಯಲ್ಲಿರುವ ಗೋವುಗಳಿಗೆ ಹುಲಿಯಿಂದ ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಿ, ದೀಪಾವಳಿ ಅಮಾವಾಸ್ಯೆಯಂದು ಅರಣ್ಯಪ್ರದೇಶದಲ್ಲಿದ್ದ ಹುಲಿದೇವರಿಗೆ ಗೋವಿನ ಬಾಲಕ್ಕೆ ಒಂದರಂತೆ ತೆಂಗಿನಕಾಯಿ ಅರ್ಪಿಸಿ, ದೇವರನ್ನು ಸಂತುಷ್ಟಗೊಳಿಸಲಾಗುತ್ತಿತ್ತು. ಹಲವು ದಶಕಗಳಿಂದ ಈ ಪದ್ಧತಿ ನಡೆದಿದ್ದು, ಈಗಲೂ ಮುಂದುವರಿದಿದೆ. ವರ್ಷಕ್ಕೆ ಒಮ್ಮೆ ಮಾತ್ರ ಕೇವಲ ಪುರುಷರು ಹುಲಿದೇವರ ದೇವಸ್ಥಾನಕ್ಕೆ ಮಧ್ಯರಾತ್ರಿಯ ಸಮಯದಲ್ಲಿ ತೆರಳಿ, ಕಾಯಿ ಸಮರ್ಪಣೆ ಮಾಡುವುದು ವಾಡಿಕೆʼ ಎಂದು ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ನಾಗರಾಜ ಕೆ. ನಾಯ್ಕ ಹೇಳಿದರು.

ADVERTISEMENT

ಅರ್ಚಕರಾದ ಲಕ್ಷ್ಮೀಕಾಂತ ಭಟ್ಟ ನೇತೃತ್ವದಲ್ಲಿ ನಡೆದ ಹುಲಿದೇವರ ಪೂಜೆಯಲ್ಲಿ, ಆಕಳ ತುಪ್ಪ, ಬೆಣ್ಣೆಯಿಂದ ನೈವೇದ್ಯ ಮಾಡಲಾಯಿತು. ಕೊರಳಲ್ಲಿ ಅಡಿಕೆ ಸರ ಹಾಕಿ, ಬಿಲ್ವಪತ್ರೆಯಿಂದ ಪೂಜಿಸಲಾಯಿತು. ಬಿದಿರಿನ ಬುಟ್ಟಿಯಲ್ಲಿ ತಂದಿದ್ದ ಹರಕೆಯ ಕಾಯಿಗಳನ್ನು ಕೇವಲ ಕಲ್ಲಿಗೆ ಒಡೆದು, ದೇವರಿಗೆ ಅರ್ಪಿಸಲಾಯಿತು. ತೆಂಗಿನಕಾಯಿ ಒಡೆಯಲು ಕೇವಲ ಕಲ್ಲು ಮಾತ್ರ ಬಳಸುವುದು ಇಲ್ಲಿನ ನಿಯಮವಾಗಿದೆ. ‘ಹಲವು ದಶಕಗಳ ಹಿಂದೆ ಹುಲಿದೇವರ ಪೂಜೆಯನ್ನೇ ಅಣಕಿಸಿ, ಪೂಜೆ ನಡೆಯುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಮಾತನಾಡುತ್ತ ನಿಶ್ಯಬ್ದದ ವಾತಾವರಣಕ್ಕೆ ಭಂಗ ತಂದಿದ್ದ ಇಬ್ಬರು ವ್ಯಕ್ತಿಗಳ ಕೊಟ್ಟಿಗೆಗೆ ಹುಲಿ ದಾಳಿ ಮಾಡಿದ ಕಥೆಯನ್ನು ಹಿರಿಯರು ಈಗಲೂ ಹೇಳುತ್ತಾರೆʼ ಎಂದು ಅವರು ಹೇಳಿದರು.

ʼಹಿಂದೆ ಹುಲಿದೇವರ ಪೂಜೆ ಮಾಡುವಾಗ ಹುಲಿ ಕೂಗುವ ಶಬ್ಧ ಭಕ್ತರಿಗೆ ಕೇಳಿಸುತ್ತಿತ್ತಂತೆ. ಹುಲಿದೇವರು ಸಂತುಷ್ಟವಾಗದಿದ್ದರೇ, ಕೊಟ್ಟಿಗೆಗೆ ಬಂದು ಜಾನುವಾರು ಎತ್ತಿಕೊಂಡು ಹೋಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಭಾಗದಲ್ಲಿ ದೀಪಾವಳಿ ಅಮಾವಾಸ್ಯೆಯಂದು ಹುಲಿದೇವರ ಪೂಜೆ ವಿಶೇಷವಾಗಿರುತ್ತದೆʼ ಎಂದು ಪೂಜೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥ ದೇವೇಂದ್ರ ನಾಯ್ಕ ಹೇಳಿದರು.

ಮುಂಡಗೋಡ ತಾಲ್ಲೂಕಿನ ಬೆಡಸಗಾಂವ್‌ ಗ್ರಾಮದ ಅರಣ್ಯಪ್ರದೇಶದಲ್ಲಿರುವ ಹುಲಿದೇವರು

ಅರಣ್ಯ ಅಧಿಕಾರಿಗಳಿಂದ ಮೆಚ್ಚುಗೆ

‘ಜಾನುವಾರು ತಿಂದೀತೆಂದು ಹುಲಿ ಚಿರತೆಗಳಿಗೆ ವಿಷ ಹಾಕಿ ಕೊಲ್ಲುವ ಮನಸ್ಥಿತಿಯುಳ್ಳ ಜನರ ಮಧ್ಯೆ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಈಗಲೂ ಮುಂದುವರಿಸಿಕೊಂಡು ಹೋಗುವ ಜನರ ಭಕ್ತಿ ಹಾಗೂ ನಂಬಿಕೆಯು ಕಾಡುಪ್ರಾಣಿಗಳ ಸಂತತಿ ಉಳಿಯಲು ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ದೇವರ ಕಾಡು ಯೋಜನೆಯಲ್ಲಿ ಹುಲಿದೇವರ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಕಾಡುಪ್ರಾಣಿಗಳ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಅವುಗಳ ವಾಸಸ್ಥಳಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮಾನವ ಬದುಕಬೇಕೆಂಬುದನ್ನು ಹೇಳಲು ಅನುಕೂಲವಾಗುತ್ತದೆ’ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ವತಃ ಭಕ್ತರಿಗೆ ಕರೆ ಮಾಡಿ ತಿಳಿಸಿದರು ಎಂದು ಗ್ರಾಮಸ್ಥ ದೇವೇಂದ್ರ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.