ADVERTISEMENT

ಹಳಿಯಾಳ: ಕುಸ್ತಿಗೆ ಸಿದ್ಧಗೊಂಡ ಅಖಾಡ

ಇಂದಿನಿಂದ ಮೂರು ದಿನ ರಾಷ್ಟ್ರ ಮಟ್ಟದ ಕುಸ್ತಿ‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 15:54 IST
Last Updated 3 ಫೆಬ್ರುವರಿ 2023, 15:54 IST
ಹಳಿಯಾಳದ ಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಿದ್ದ ಗೊಂಡಿರುವ ಜಿಲ್ಲಾ ಕುಸ್ತಿ ಆಖಾಡ
ಹಳಿಯಾಳದ ಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಿದ್ದ ಗೊಂಡಿರುವ ಜಿಲ್ಲಾ ಕುಸ್ತಿ ಆಖಾಡ   

ಹಳಿಯಾಳ: ಇಲ್ಲಿನ ಜಿಲ್ಲಾ ಕುಸ್ತಿ ಅಖಾಡದಲ್ಲಿ ಫೆ.4ರಿಂದ 6 ರವರೆಗೆ ವಿ.ಆ‌ರ್‌.ದೇಶಪಾಂಡೆ ಮೇಮೋರಿಯಲ್‌ ಟ್ರಸ್ಟ್ ಹಾಗೂ ರಾಜ್ಯ ಕುಸ್ತಿ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಸಿದ್ಧತೆ ಪೂರ್ಣಗೊಂಡಿದೆ.

ಸಾವಿರಕ್ಕೂ ಮಿಕ್ಕಿ ಪುರುಷ ಹಾಗೂ ಮಹಿಳೆಯರು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಸ್ಥಳೀಯ ಹಾಗೂ ಬೇರೆ ಬೇರೆ ಜಿಲ್ಲೆಯ ಪೈಲವಾನರು ಇಲ್ಲಿನ ಕುಸ್ತಿ ಅಖಾಡಕ್ಕೆ ಬಂದು ತಾಲೀಮಿನಲ್ಲಿ ನಿರತರಾಗಿದ್ದಾರೆ.

ದೆಹಲಿ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಚಂಡೀಗಢ ಮತ್ತಿತರ ರಾಜ್ಯದ ಪೈಲವಾನರಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ ಹಲವರು ತಮ್ಮ ಹೆಸರು ನೋಂದಾಯಿಸಿದ್ದಾರೆ.

ADVERTISEMENT

ಸುಮಾರು ಒಂದು ಎಕರೆ ವಿಸ್ತೀರ್ಣ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದ್ದು ಅದರೊಳಗೆ ಕುಸ್ತಿ 85 ಅಡಿ ಉದ್ದ 45 ಅಡಿ ಅಗಲದ ಕುಸ್ತಿ ಕಣ ನಿರ್ಮಿಸಲಾಗಿದೆ. ರಾಷ್ಟ್ರ ಮಟ್ಟದಲ್ಲಿ ನಡೆಯುವ ಹಾಗೆ ಅಂಕ ಆಧಾರಿತವಾಗಿ ಪಂದ್ಯಗಳು ನಡೆಯಲಿವೆ. ಕೊನೆಯ ದಿನ ಅಂತಿಮ ಹಣಾಹಣಿ ಮಟ್ಟಿ ನೆಲದ ಮೇಲೆ ಗೆಲುವು ನಿರ್ಧಾರ ಆಗುವ ತನಕ ನಡೆಯಲಿದೆ. 15 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಲು ಅನುಕೂಲವಾಗುವ ರೀತಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.

ಶನಿವಾರ ಮಧ್ಯಾಹ್ನ 2 ಗಂಟೆಗೆ ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಕುಸ್ತಿ ಪೈಲವಾನರನ್ನು ಮೆರವಣಿಗೆಯೊಂದಿಗೆ ಅಖಾಡಕ್ಕೆ ತರಲಾಗುತ್ತಿದೆ. ಆ ಬಳಿಕ ಕುಸ್ತಿ ಪಂದ್ಯಕ್ಕೆ ಚಾಲನೆ ಸಿಗಲಿದೆ.

ಅಂತರರಾಷ್ಟ್ರಿಯ ಕ್ರೀಡಾಪಟು ಕಲ್ಲಪ್ಪಾ ಶಿರೋಳ, ಕೆ.ಕೆ.ಹಳ್ಳಿಯ ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿ, ಅರಿಕೆರೆಯ ಮಾಧವಾನಂದ ಸ್ವಾಮಿಜೀ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಯಶ್ವತಾನಂದ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.