ADVERTISEMENT

ಅಡುಗೆಮನೆಯಿಂದ ಯಕ್ಷ ಪಾತ್ರದವರೆಗೆ...

ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ

ಸಂಧ್ಯಾ ಹೆಗಡೆ
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ನಿರ್ಮಲಾ ಹೆಗಡೆ
ನಿರ್ಮಲಾ ಹೆಗಡೆ   

ಶಿರಸಿ: ‘ಕೊನೆಕೊಯ್ಲೆಂದರೆ ಮನೆಯಲ್ಲಿ ಸಮಾರಾಧನೆ ಇದ್ದ ಹಾಗೆ. ಆ ಹೊತ್ತಿಗೆ ಉಳಿದೆಲ್ಲ ಕೆಲಸಗಳೂ ಗೌಣವೇ. ಕೆಲಸಗಾರರಿಗೆ ತಿಂಡಿ, ಚಹಾ, ಅಡುಗೆ ಇವೆಲ್ಲ ತಯಾರಾದ ಮೇಲೆಯೇ ಮುಂದಿನ ಯೋಚನೆ. ಅದೇದಿನ ಯಕ್ಷಗಾನವಿದ್ದರಂತೂ, ಮನೆಯವರ ಸಹಕಾರವಿಲ್ಲದಿದ್ದರೆ ಪಾತ್ರ ಮಾಡಲು ಹೋಗುವುದು ದೂರದ ಮಾತು...’ ಹೀಗೆ ಮಾತಿಗೆ ಶುರು ಮಾಡಿದರು ನಿರ್ಮಲಾ ಹೆಗಡೆ.

ತಾಲ್ಲೂಕಿನ ಗೋಳಿಕೊಪ್ಪದ ನಿರ್ಮಲಾ ಹೆಗಡೆ ಯಕ್ಷಗಾನ ಕಲಾವಿದೆ. ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿರುವ ಅವರು, ಯಕ್ಷಗೆಜ್ಜೆ ಮಹಿಳಾ ಮತ್ತು ಮಕ್ಕಳ ತಂಡ ನಡೆಸುತ್ತಿದ್ದಾರೆ. ಯಕ್ಷಗಾನ ಗಂಡುಕಲೆ ಎಂಬ ಮಾತು ಸದಾ ಪ್ರಚಲಿತ. ಈ ಮಾತನ್ನು ಕೇಳಿಸಿಕೊಳ್ಳುತ್ತಲೇ, ಯಕ್ಷ ನೆಲದಲ್ಲಿ ಬೆಳೆದಿರುವ ಅವರು, ಕೊನೆಗೆ ಆಯ್ದುಕೊಂಡಿದ್ದು ಇದೇ ಕ್ಷೇತ್ರವನ್ನೇ.

ಮನೆ–ತೋಟ, ಪ್ರವೃತ್ತಿ ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವ ಕಲೆಯನ್ನೂ ಕರಗತ ಮಾಡಿಕೊಂಡಿರುವ ಅವರು, ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಳ್ಳುತ್ತ, ಸ್ತ್ರೀಯೊಬ್ಬಳ ಬಹುಮುಖಿ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು.

ADVERTISEMENT

‘ಒಮ್ಮೊಮ್ಮೆ ಏದುಸಿರು ಬಿಡುತ್ತ ಮನೆಗೆಲಸವನ್ನೆಲ್ಲ ಮುಗಿಸಿ, ಯಕ್ಷಗಾನಕ್ಕೆ ಓಡಬೇಕು. ಅಡುಗೆಮನೆ ಪ್ರಪಂಚವನ್ನು ಮೀರಿ, ತಕ್ಷಣಕ್ಕೆ ಯಕ್ಷಗಾನ ಪಾತ್ರ ಪ್ರವೇಶ ಮಾಡಬೇಕು. ಹೀಗೆ ತಕ್ಷಣಕ್ಕೆ ಮನಸ್ಸನ್ನು ಹೊರಳಿಸಿ, ಇನ್ನೊಂದು ಪಾತ್ರ ನಿರ್ವಹಣೆ ಮಾಡುವ ಕಲೆ ಸ್ತ್ರೀಗೆ ಹೊಸತೇನಲ್ಲ. ಹೀಗಾಗಿಯೇ ಇರಬೇಕು, ಒತ್ತಡಗಳನ್ನು ಮರೆತು ಪಾತ್ರಕ್ಕೆ ಜೀವ ತುಂಬುವಲ್ಲಿ ಮಹಿಳೆ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾಳೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಇತ್ತೀಚೆಗೆ ಬಹಳಷ್ಟು ಮಹಿಳೆಯರು ಯಕ್ಷಗಾನ ಪಾತ್ರ ಮಾಡುತ್ತಾರೆ. ಪುರುಷರಿಗೆ ಸಮಾನವಾಗಿ ಸ್ವರ, ಕುಣಿತದಲ್ಲಿ ಅಭಿನಯಿಸಲು ಸ್ತ್ರೀಗೆ ಕಷ್ಟ ಎಂಬ ಮಾತನ್ನು ಅಲ್ಲಗಳೆದು ತೋರಿದ್ದಾರೆ. ವೇಷ ಕಟ್ಟಿದ ಮೇಲೆ ಪಾತ್ರದೊಳಗೆ ಒಂದಾಗಿ, ಭಾವಕ್ಕೆ ಜೀವ ತುಂಬುವಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಪುರುಷರ ಮೇಳದಲ್ಲಿ ಮಹಿಳೆ ಪಾತ್ರ ನಿರ್ವಹಿಸುವಾಗ ಕೆಲವೊಮ್ಮೆ ಸ್ವರಭಾರದ ಕೊರತೆ ಆಗುವುದಿದೆ. ಆದರೆ, ಪುರುಷರ ಜೊತೆಗೆ ಯಕ್ಷಗಾನ ಪಾತ್ರಧಾರಿಯಾಗಿ ಅಭಿನಯಿಸುವ ಕಲಾವಿದೆಯರು, ಸರಿಸಮಾನರಾಗಿ ಕುಣಿತ ಪ್ರದರ್ಶಿಸಿ ಭೇಷ್ ಎನಿಸಿಕೊಳ್ಳುತ್ತಾರೆ’ ಎನ್ನುವಾಗ ಅವರಿಗೆ ತುಂಬ ಖುಷಿಯಿತ್ತು.

ಗಡಿಗೆಹೊಳೆಯ ಕಾಶ್ಯಪ ಪ್ರತಿಷ್ಠಾನದ ಮಹಿಳಾ ಯಕ್ಷಗಾನ ತಂಡದ ಮೂಲಕ ಈ ಕ್ಷೇತ್ರಕ್ಕೆ ಬಂದಿರುವ ನಿರ್ಮಲಾ ಹೆಗಡೆ, ಅಂಬೆ, ಕೌರವ, ದಕ್ಷ, ಶಕುಂತಲೆ ಹೀಗೆ ಎಲ್ಲ ರೀತಿ ಪಾತ್ರಗಳನ್ನು ಮಾಡಿದ್ದಾರೆ. 300ಕ್ಕೂ ಹೆಚ್ಚು ಯಕ್ಷಗಾನಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.