ಹೊನ್ನಾವರ: ‘ವಿಚಾರ ಹಾಗೂ ಭಾವನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸಲು ಯಕ್ಷಗಾನ ರಂಗಭೂಮಿ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಶತಮಾನದ ಇತಿಹಾಸವಿರುವ ಕೆರೆಮನೆ ಮೇಳ ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿದೆ’ ಎಂದು ಲೇಖಕ ನಾರಾಯಣ ಯಾಜಿ ಸಾಲೆಬೈಲು ಅಭಿಪ್ರಾಯಪಟ್ಟರು.
ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಅಖಿಲ ಭಾರತ ರಂಗ ಕಲಾವಿದರಿಗಾಗಿ ಗುಣವಂತೆಯ ಯಕ್ಷಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ 21 ದಿನಗಳ ಯಕ್ಷಗಾನ ಪರಿಚಯಾತ್ಮಕ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಘಾಟನೆ ನೆರವೇರಿಸಿದ ಯಕ್ಷರಂಗ ಮಾಸಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ, ‘ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪೂರ್ತಿಯಾಗಿ ಯಕ್ಷಗಾನದ ರಸಾಸ್ವಾದನೆ ಸಾಧ್ಯವಾಗುವುದಿಲ್ಲ. ರಂಗದ ಮೇಲೆ ಕಲಾವಿದನಾಗಿ ಅಥವಾ ಮುಂಭಾಗದಲ್ಲಿ ಕುಳಿತು ಪ್ರೇಕ್ಷಕನಾಗಿ ಇದನ್ನು ಅನುಭವಿಸಬೇಕು’ ಎಂದು ಹೇಳಿದರು.
ಪತ್ರಕರ್ತ ಎಚ್.ಎಂ. ಮಾರುತಿ ಮಾತನಾಡಿದರು. ಚಿಂತಕ ಗುರುರಾಜ ಮಾರ್ಪಳ್ಳಿ, ಕಲಾವಿದ ಶ್ರೀಧರ ಹೆಗಡೆ ಕೆರೆಮನೆ ಭಾಗವಹಿಸಿದ್ದರು.
ದೇಶದ ವಿವಿಧ ರಾಜ್ಯಗಳ 12 ರಂಗ ಕಲಾವಿದರು ಪ್ರಸ್ತುತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.