ADVERTISEMENT

ಕಳ್ಳರನ್ನು ಬಂಧಿಸದಿದ್ದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ; ಎಂ.ಕೆ.ಭಟ್ಟ ಯಡಳ್ಳಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:29 IST
Last Updated 5 ಅಕ್ಟೋಬರ್ 2025, 7:29 IST
ಎಂ.ಕೆ.ಭಟ್ಟ
ಎಂ.ಕೆ.ಭಟ್ಟ   

ಯಲ್ಲಾಪುರ: ʻತಾಲ್ಲೂಕಿನಲ್ಲಿ ಕಳ್ಳತನದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚುವ ವಿಷಯದಲ್ಲಿ ಪೊಲೀಸರ ನಿಷ್ಕ್ರೀಯತೆ ಎದ್ದು ಕಾಣುತ್ತಿದೆ. ಹತ್ತು ದಿನಗಳಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸದಿದ್ದಲ್ಲಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದುʼ ಎಂದು ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻಪಟ್ಟಣದ ಟಿಳಕಚೌಕ, ಆನಗೋಡಿನ ಬಾಳಗಿಮನೆ, ಮಂಚಿಕೇರಿ, ಇಡಗುಂದಿ ಹಾಗೂ ಕುಂದರಗಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ನಡೆದಿದೆ. ಆದರೆ ಈವರೆಗೂ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ. ಅನೇಕ ಕಳ್ಳತನದ ಪ್ರಕರಣದಲ್ಲಿ ಇಲಾಖೆಗೆ ಕಳ್ಳತನದ ಸಿಸಿಟಿವಿ ಕ್ಯಾಮೆರಾ ದೃಶ್ಯ, ವಾಹನದ ನಂಬರ್‌ ನೀಡಿದ್ದೇವೆ. ಆದರೂ ಇಲಾಖೆ ಕಳ್ಳರನ್ನು ಹಿಡಿಯಲು ಮೀನವೇಷ ಎಣಿಸುತ್ತಿರುವುದು ಆಶ್ಚರ್ಯ ತಂದಿದೆʼ ಎಂದರು.

‘ಡಿವೈಎಸ್‌ಪಿ ಗೀತಾ ಪಾಟೀಲ ಅವರಿಗೆ ಮನವಿ ಮಾಡಲಾಗಿದೆ. ಕುಂದರಗಿಯಲ್ಲಿ ನಡೆದ ಸಭೆಯಲ್ಲಿ ಅವರು ಆರೋಪಿಗಳನ್ನು ಶೀಘ್ರ ಹಿಡಿಯುವ ಭರವಸೆ ನೀಡಿದ್ದರು. ಅದು ಈಡೇರಿಲ್ಲ. ಮಂಚಿಕೇರಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿದ್ದರೂ ಹಿಡಿಯದೇ ಇರುವುದು ಏಕೆ? ಯಾವ ಒತ್ತಡ ಇದೆ’ ಎಂದು ಪ್ರಶ್ನಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಸದಸ್ಯ ಗಣೇಶ ಹೆಗಡೆ ಮಾತನಾಡಿ,ʻಉಮ್ಮಚಗಿಯಲ್ಲಿ ಈಚೆಗೆ ಕಳ್ಳತನ ನಡೆದಿದೆ. ಆದರೆ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಬಂದು ತನಿಖೆ ನಡೆಸಿಲ್ಲ. ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆ ಹೆಚ್ಚುತ್ತಿದೆ. ಗಾಂಜಾ ಸೇರಿದಂತೆ ಅನೇಕ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆದಿದೆ’ ಎಂದು ದೂರಿದರು.

ಕಣ್ಣಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ಮರಾಠಿ, ಉಮ್ಮಚಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಿತ್ಲಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣ ಹೆಗಡೆ, ಪ್ರಮುಖರಾದ ಸದಾಶಿವ ಚಿಕ್ಕೊತ್ತಿ, ಪ್ರಕಾಶ ಶಾಪೂರಕರ, ಸುಬ್ಬಣ್ಣ ಉದ್ದಾಬೈಲ್, ಕೆ.ಟಿ.ಹೆಗಡೆ, ವಿ.ಎನ್.ಭಟ್ ಏಕಾನ, ಅರುಣ ಭಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.