
ಕಾರವಾರ: ‘ರಾಮನ ಧ್ಯಾನ ಮನಸ್ಸನ್ನು ಆರೋಗ್ಯ ಕಾಪಾಡಿದರೆ, ಯೋಗಾಭ್ಯಾಸ ದೈಹಿಕ ಸ್ವಾಸ್ಥ್ಯ ಉತ್ತಮಗೊಳಿಸುತ್ತದೆ. ರಾಮ ಸ್ಮರಣೆ, ಯೋಗಾಭ್ಯಾಸ ಅನುಸರಣೆ ಜೀವನಕ್ಕೆ ಅತಿ ಅಗತ್ಯ’ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಮಠದಲ್ಲಿ ನಡೆಯುತ್ತಿರುವ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ‘ಯೋಗ ನಡಿಗೆ–ರಾಮನೆಡೆಗೆ’ ಎಂಬ ಧ್ಯೇಯ ವಾಕ್ಯದಡಿ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಿತ್ಯ ಜೀವನದಲ್ಲಿ ಪ್ರಭು ರಾಮಚಂದ್ರನ ಆದರ್ಶಗುಣಗಳ ಪಾಲನೆ ಮಾಡಬೇಕು. ಯೋಗಭ್ಯಾಸ, ನಡಿಗೆಯೊಂದಿಗೆ ರಾಮನಾಮ ಜಪ ಪ್ರಜ್ವಲಿಸಿದರೆ ಪ್ರತಿಕ್ಷಣ ಪ್ರತಿನಡಿಗೆಯೂ ರಾಮನೆಡೆಗೆ ಇರಲಿದೆ’ ಎಂದರು.
77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ಎದುರು ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಭಕ್ತರು ಯೋಗಾಸನ ಮಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ಯೋಗಗುರು ಮೈಸೂರಿನ ಡಾ.ಕಾರ್ಕಳ ರಾಘವೇಂದ್ರ ಪೈ ಅವರು ಭಕ್ತರಿಗೆ ಯೋಗ ತರಬೇತಿ ನೀಡಿದರು.
ಗಣೇಶ ನಮನ ನಡಿಗೆ, ಪ್ರಾಣ ಚೈತನ್ಯಕ್ರಿಯೆ, ಯೋಗನಡಿಗೆ ಪೈ ಸೂತ್ರ, ಕರ್ಣ ಚೈತನ್ಯ ಮಾಲಾಕ್ರಿಯೆ, ವಿಠ್ಠಲಭಾತಿ, ಪ್ರಾಣಾಯಾಮ, ಸಂಹಿತಾಧ್ಯಾನ, ಯೋಗನಿದ್ರೆ ಸೇರಿದಂತೆ ವಿವಿದ ತಂತ್ರಗಳನ್ನು ಪಾಲನೆ ಮಾಡಿದರು.
ಮಠದ ವ್ಯವಸ್ಥಾಪನ ಸಮಿತಿಯ ದಿನೇಶ ಪೈ, ಪ್ರದೀಪ ಪೈ, ರಾಜೇಶ ನಾಯಕ ಭಟ್ಕಳ, ಡಾ.ಕಾಶಿನಾಥ ಪೈ ಗಂಗೊಳ್ಳಿ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.