ADVERTISEMENT

ಕುಗ್ರಾಮಕ್ಕೆ ಸೌಕರ್ಯ ಒದಗಿಸಲು ಬದ್ಧ: ಮೊಹಮ್ಮದ್ ರೋಶನ್

ಮಲ್ಲಾಪುರ ಗ್ರಾಮದ ಕುಚೆಗಾರಕ್ಕೆ ಭೇಟಿ ನೀಡಿದ ಜಿ.ಪಂ. ಸಿ.ಇ.ಒ ಮೊಹಮ್ಮದ್ ರೋಶನ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 11:49 IST
Last Updated 27 ಅಕ್ಟೋಬರ್ 2020, 11:49 IST
ಕಾರವಾರ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಕುಚೆಗಾರಕ್ಕೆ ಮಂಗಳವಾರ ಭೇಟಿ ನೀಡಿದ ಜಿ.ಪಂ. ಸಿ.ಇ.ಒ ಮೊಹಮ್ಮದ್ ರೋಶನ್, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಚಿತ್ರದಲ್ಲಿದ್ದಾರೆ.
ಕಾರವಾರ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಕುಚೆಗಾರಕ್ಕೆ ಮಂಗಳವಾರ ಭೇಟಿ ನೀಡಿದ ಜಿ.ಪಂ. ಸಿ.ಇ.ಒ ಮೊಹಮ್ಮದ್ ರೋಶನ್, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಚಿತ್ರದಲ್ಲಿದ್ದಾರೆ.   

ಕಾರವಾರ: ‘ತಾಲ್ಲೂಕಿನ ಮಲ್ಲಾಪುರ ಗ್ರಾಮದ ಕುಚೆಗಾರ ಎಂಬ ಕುಗ್ರಾಮಕ್ಕೆಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ನೀಡಲು ಜಿಲ್ಲಾ ಪಂಚಾಯ್ತಿಯು ಬದ್ಧವಾಗಿದೆ. ಗ್ರಾಮದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.

‘ಪ್ರಜಾವಾಣಿ’ಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು (ಪಿ.ವಿ ವೆಬ್ ಎಕ್ಸ್‌ಕ್ಲೂಸಿವ್) ಗಮನಿಸಿ ಅವರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.

‘ಇಲ್ಲಿನ ಹಳ್ಳದಲ್ಲಿ ನೀರು ಸದಾ ತುಂಬಿ ಹರಿಯುತ್ತಿರುತ್ತದೆ. ಬೆರಳೆಣಿಕೆಯಷ್ಟೇ ಮನೆಗಳಿದ್ದು, ಆರೋಗ್ಯ ಸಮಸ್ಯೆಯಾದರೆ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಹರಸಾಹಸ ಪಡಬೇಕಿದೆ. ಹಳ್ಳದ ನೀರಿನಿಂದಾಗಿ ಊರಿನೊಳಗೆ ವಾಹನಗಳು ಬರಲು ಸಾಧ್ಯವಾಗುತ್ತಿಲ್ಲ. ದಿನಸಿ, ಆಕಳಿನ ಮೇವು, ಹಿಂಡಿ, ಕೃಷಿ ಪರಿಕರಗಳನ್ನು ಹಳ್ಳದ ಬುಡದಿಂದ ತಲೆಹೊರೆಯಲ್ಲೇ ತೆಗೆದುಕೊಂಡು ಹೋಗಬೇಕಿದೆ. ಹಾಗಾಗಿ ಈಗ ಇರುವ ಕಾಲುಸಂಕದ ಸಮೀಪದಲ್ಲೇ ಮತ್ತೊಂದು ಕಿರುಸೇತುವೆ ನಿರ್ಮಾಣ ಮಾಡಿದರೆ ನಾಲ್ಕು ಚಕ್ರಗಳ ವಾಹನಗಳು ಸಾಗಲು ಸಾಧ್ಯವಾಗುತ್ತದೆ’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ADVERTISEMENT

ಈ ವೇಳೆ ಮಾತನಾಡಿದ ಗ್ರಾಮದ ಯುವ ಪದವೀಧರ, ಹೈನುಗಾರ ಗಣಪತಿ ಭಟ್, ‘ಈ ಮೊದಲು ಹೈನುಗಾರಿಕೆ ಮಾಡುತ್ತಿದ್ದ ಕೆಲವರು, ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ಬಹಳ ಸಂಕಷ್ಟ ಅನುಭವಿಸಿದ್ದಾರೆ. ಆ ವೃತ್ತಿಯಿಂದಲೇ ಹಿಂದೆ ಸರಿದಿದ್ದಾರೆ. ಇಲ್ಲಿ ಕನಿಷ್ಠ ಮೂಲ ಸೌಕರ್ಯವನ್ನಾದರೂ ಒದಗಿಸಿದರೆ ಮತ್ತಷ್ಟು ಮಂದಿಗೆ ಪ್ರೇರಣೆಯಾಗಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಹಂತಗಳಲ್ಲಿ ಮೂಲ ಸೌಕರ್ಯ’:

‘ಕುಚೆಗಾರ ಗ್ರಾಮದ ಸಮಸ್ಯೆಗಳನ್ನು ಪರಿಶೀಲಿಸಿದ್ದು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ (ಸಿ.ಎಸ್.ಆರ್) ಬಳಸಿ ಸೇತುವೆ ನಿರ್ಮಾಣ ಮಾಡಲಾಗುವುದು. ಸದ್ಯ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಿದೆ. ಇನ್ನೊಂದೆರಡು ತಿಂಗಳಲ್ಲಿ ಸೇತುವೆ ಕಾಮಗಾರಿ, ಬಳಿಕ ಇತರ ಅಗತ್ಯ ಮೂಲ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ನೀಡಲು ಪರಿಶೀಲಿಸಲಾಗುವುದು’ ಎಂದು ಮೊಹಮ್ಮದ್ ರೋಶನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.