ADVERTISEMENT

ಸವಾಲು ನಡುವೆ ಜೊಯಿಡಾ ಅಭಿವೃದ್ಧಿ: ಶಾಸಕ ಆರ್.ವಿ.ದೇಶಪಾಂಡೆ

‘ತಾಲ್ಲೂಕು ಆಡಳಿತ ಸೌಧ’ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 14:14 IST
Last Updated 8 ಜನವರಿ 2025, 14:14 IST
ಜೊಯಿಡಾದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ನಡೆದ ತಾಲ್ಲೂಕು ಆಡಳಿತ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು
ಜೊಯಿಡಾದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ನಡೆದ ತಾಲ್ಲೂಕು ಆಡಳಿತ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು   

ಜೊಯಿಡಾ: ‘ಇಲ್ಲಿನ ಜನರಿಗೆ ಅಭಿವೃದ್ಧಿಯ ಪರಿಚಯವಿರಲಿಲ್ಲ, ಹಲವು ಸವಾಲುಗಳ ನಡುವೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಸಹಕಾರದಿಂದ ತಾಲ್ಲೂಕಿನ ಅಭಿವೃದ್ಧಿ ಮಾಡಿದ್ದೇನೆ’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

 ಜೊಯಿಡಾದಲ್ಲಿ ಬುಧವಾರ ಸುಮಾರು ₹893.22 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ‘ತಾಲ್ಲೂಕು ಆಡಳಿತ ಸೌಧ’ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಪ್ರವಾಸೋದ್ಯಮ ಸಚಿವನಾಗಿ ಇಡೀ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದೇನೆ. ಇಂದು ಜೊಯಿಡಾ, ದಾಂಡೇಲಿ ಭಾಗದಲ್ಲಿ ಸುಮಾರು ನೂರಕ್ಕೂ ಅಧಿಕ ರೆಸಾರ್ಟ್ ಮತ್ತು 250 ಕ್ಕೂ ಅಧಿಕ ಹೋಂ ಸ್ಟೇಗಳು ಇವೆ, ಇದರಿಂದಾಗಿ ಉದ್ಯೋಗ ಸೃಷ್ಟಿಯಾಗಿದೆ, ಅಧಿಕಾರ ಕ್ಷಣಿಕವಾಗಿದ್ದು ದೇವರು ಅವಕಾಶ ಕೊಟ್ಟಾಗ ಜನರಿಗೆ ಸಹಾಯ ಮಾಡಬೇಕು, ಕಚೇರಿಗಳಲ್ಲಿ ಜನರಿಗೆ ಗೌರವ ಸಿಗಬೇಕು, ಸ್ಥಳೀಯ ಜನರಿಗೆ ಪ್ರವಾಸೋದ್ಯಮದಲ್ಲಿ ಅಭಿರುಚಿ ಇರಬೇಕು’ ಎಂದರು.

ADVERTISEMENT

ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ., ಮಾತನಾಡಿ, ‘ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿಯೂ ಆಡಳಿತ ಸೌಧ ಇದ್ದು, ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಕಂದಾಯ ಇಲಾಖೆ ಉತ್ತಮ ಪ್ರಗತಿ ಸಾಧಿಸಿದೆ, ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿದ್ದು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ಎಲ್ಲರೂ ಆರ್‌ಟಿಸಿಗಳಿಗೆ ಆಧಾರ ಕಾರ್ಡ್ ಅನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು’ ಎಂದು ಹೇಳಿದರು.

ಆರೋಗ್ಯ ಪುಷ್ಠಿ ಯೋಜನೆಯಡಿಯಲ್ಲಿ ತಾಲ್ಲೂಕಿನ 1090 ಮಹಿಳೆಯರಿಗೆ ಪೌಷ್ಟಿಕ ಆಹಾರದ ಕಿಟ್‌ ಬಂದಿದ್ದು, ಸಾಂಕೇತಿಕವಾಗಿ ಕೆಲವರಿಗೆ ವಿತರಿಸಲಾಯಿತು.

ಲೋಕೋಪಯೋಗಿ ಇಲಾಖೆಯ ಎಇಇ ಶಿವಪ್ರಕಾಶ ಶೇಟ್ ಪ್ರಾಸ್ತಾವಿಕ ಮಾತನಾಡಿದರು. ತಹಶಿಲ್ದಾರ್‌ ಮಂಜುನಾಥ ಮುನ್ನೊಳಿ ಸ್ವಾಗತಿಸಿದರು. ಶಿಕ್ಷಕ ವಿಷ್ಣು ಪಟಗಾರ ನಿರೂಪಿಸಿದರು.

ಉಪ ವಿಭಾಗಾಧಿಕಾರಿ ಕನಿಷ್ಕ, ಕಾಂಗ್ರೆಸ್  ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಲೋಕೋಪಯೋಗಿ ಇಲಾಖೆಯ ಶಿರಸಿ ವಿಭಾಗದ ಎಂಜಿನಿಯರ್ ಎಚ್ ಮಂಜುನಾಥ, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಪುರುಷೋತ್ತಮ ಕಾಮತ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರೀಮಾ ಮೀರಾಶಿ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.