ಜೊಯಿಡಾ: ಶ್ರಾವಣ ಮಾಸದ ಅಂಗವಾಗಿ ತಾಲ್ಲೂಕಿನ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಶ್ರಾವಣ ಸೋಮವಾರ ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು.
ರಾಜ್ಯದ ಹಾವೇರಿ, ಧಾರವಾಡ, ಕಲಘಟಗಿ, ಹುಬ್ಬಳ್ಳಿ ಸೇರಿದಂತೆ ಬೆಳಗಾವಿ, ಬೈಲಹೊಂಗಲ ಭಾಗದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೋಮವಾರ ಉಳವಿ ಚನ್ನಬಸವೇಶ್ವರ ದರ್ಶನಕ್ಕೆ ಬಂದಿದ್ದು ಜಾತ್ರಾ ಮಹೋತ್ಸವದ ಸಂಭ್ರಮ ಮನೆ ಮಾಡಿತ್ತು.
ಶ್ರಾವಣ ಸೋಮವಾರದ ಅಂಗವಾಗಿ ದಾಂಡೇಲಿ, ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೈಕ್ ಹಾಗೂ ಟ್ರ್ಯಾಕ್ಟರ್‌ಗಳಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಉಳಿವಿಗೆ ಆಗಮಿಸಿದ್ದರು. ಶ್ರಾವಣ ಮಾಸದ ಸೋಮವಾರದಂದು ಬರುವ ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಉಳಿವಿಗೆ ಬಹುತೇಕ ಅಧಿಕ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಭಕ್ತರು ಬರುತ್ತಿದ್ದು, ಉಳವಿ ಸೇರಿದಂತೆ ಜೊಯಿಡಾ, ಕುಂಭಾರವಾಡದಲ್ಲಿ ಚಹಾದ ಅಂಗಡಿಗಳಲ್ಲಿ ಬೊಂಡಾ ಬಜ್ಜಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಈ ಭಾಗದ ಬೊಂಡಾ ಬಜ್ಜಿ ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು.
ಉಳವಿಗೆ ಬರುವ ಬಸ್‌ಗಳು ಭಕ್ತರಿಂದ ತುಂಬಿ ಸಂಚರಿಸುವುದರಿಂದ ಸ್ಥಳೀಯ ಪ್ರಯಾಣಿಕರು ಮತ್ತು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.