ADVERTISEMENT

ವಸತಿಯುತ ಶಾಲೆ, ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 13:17 IST
Last Updated 22 ಮಾರ್ಚ್ 2022, 13:17 IST

ಕಾರವಾರ: ‘ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಕಡ್ಡಾಯವಾಗಿ ವಸತಿ ನಿಲಯ ಹಾಗೂ ವಸತಿಯುತ ಶಾಲೆಗಳಲ್ಲಿಪ್ರತಿ ವಾರ ಒಂದು ರಾತ್ರಿ ಕಡ್ಡಾಯವಾಗಿ ವಾಸ್ತವ್ಯ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ಆದೇಶಿಸಿದ್ದಾರೆ.

‘ವಸತಿಯುತ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಪ್ರಥಮ ಆದ್ಯತೆ ಮೇರೆಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಆದ್ದರಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ವಾಸ್ತವ್ಯ ಮಾಡಬೇಕು’ ಎಂದು ಸೂಚಿಸಿದ್ದಾರೆ.

‘ವಾಸ್ತವ್ಯದ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗಾಗಿ ತಯಾರಿಸಿದ ಆಹಾರವನ್ನೇ ಸೇವಿಸಬೇಕು. ಜೊತೆಗೆ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಮೂಲ ಸೌಲಭ್ಯಗಳನ್ನೇ ಅಧಿಕಾರಿಗಳು ಉಪಯೋಗಿಸಬೇಕು. ವಾಸ್ತವ್ಯದ ವೇಳೆ ಯಾವುದೇ ಹೆಚ್ಚಿನ ಸೌಕರ್ಯಗಳನ್ನು ಪಡೆಯಬಾರದು’ ಎಂದು ತಾಕೀತು ಮಾಡಿದ್ದಾರೆ.

ADVERTISEMENT

‘ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಮೇಲಧಿಕಾರಿಗಳಿಗೆ ತಾವು ವಾಸ್ತವ್ಯ ಮಾಡಿದ ವಸತಿ ನಿಲಯ ಹಾಗೂ ವಸತಿ ಶಾಲೆಗಳ ಬಗ್ಗೆ ಮರುದಿನವೇ ವರದಿ ಸಲ್ಲಿಸಬೇಕು. ಪ್ರತಿ ತಿಂಗಳು ತಮ್ಮ ದಿನಚರಿಯಲ್ಲಿ ವಿವರವಾದ ವರದಿಯನ್ನು ಕಡ್ಡಾಯವಾಗಿ ನಮೂದಿಸಿ ಸಲ್ಲಿಸಬೇಕು. ಈ ಕ್ರೋಡೀಕೃತ ವರದಿಯನ್ನು ಪರಿಶೀಲಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ದಿನಚರಿಯೊಂದಿಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಈ ಎಲ್ಲ ವರದಿಗಳನ್ನು ಪ್ರತಿ ತಿಂಗಳು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲನೆ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.