ADVERTISEMENT

ಜೇನುಕಲ್ಲು ಗುಡ್ಡವೀಗ ಮತ್ತಷ್ಟು ಸುಂದರ

ಜಿಲ್ಲಾ ಪಂಚಾಯಿತಿಯ ಅನುದಾನದಿಂದ ಸಾಧ್ಯವಾದ ವಿವಿಧ ಅಭಿವೃದ್ಧಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 15:22 IST
Last Updated 2 ಜುಲೈ 2022, 15:22 IST
ಜೇನುಕಲ್ಲು ಗುಡ್ಡದಲ್ಲಿ ವೀಕ್ಷಣಾ ಗೋಪುರವನ್ನು ನವೀಕರಣಗೊಳಿಸಿ, ಸುತ್ತಲೂ ಭದ್ರವಾದ ಬೇಲಿ ಅಳವಡಿಸಲಾಗಿದೆ
ಜೇನುಕಲ್ಲು ಗುಡ್ಡದಲ್ಲಿ ವೀಕ್ಷಣಾ ಗೋಪುರವನ್ನು ನವೀಕರಣಗೊಳಿಸಿ, ಸುತ್ತಲೂ ಭದ್ರವಾದ ಬೇಲಿ ಅಳವಡಿಸಲಾಗಿದೆ   

ಕಾರವಾರ: ಜಿಲ್ಲೆಯ ಸುಂದರ, ಚಾರಣ ಪ್ರಿಯರ ತಾಣಗಳಲ್ಲಿ ಒಂದಾಗಿರುವ ಜೇನುಕಲ್ಲು ಗುಡ್ಡ ಈಗ ನವೀಕರಣಗೊಂಡು ಆಕರ್ಷಿಸುತ್ತಿದೆ. ಅವ್ಯವಸ್ಥೆಯಿಂದ ಕೂಡಿದ್ದ ಇಡೀ ಪ್ರದೇಶವನ್ನು ಅಚ್ಚಕಟ್ಟಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ.

ಯಲ್ಲಾಪುರದಿಂದ 16 ಕಿಲೋಮೀಟರ್ ದೂರದಲ್ಲಿರುವ ಈ ತಾಣ ಮೊದಲಿನಿಂದಲೂ ಪ್ರಸಿದ್ಧವಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಸೊರಗಿತ್ತು. ಗುಡ್ಡದ ಅಂಚಿನಲ್ಲಿರುವ ಪ್ರದೇಶವಾಗಿರುವ ಕಾರಣ, ಪ್ರವಾಸಿಗರ ಸುರಕ್ಷತೆಗೆ ಸದಾ ಆತಂಕವಿತ್ತು. ಈ ಹಿಂದೆ ಅಳವಡಿಸಲಾಗಿದ್ದ ಮುಳ್ಳು ತಂತಿಯ ಬೇಲಿಗಳು ಹಾಳಾಗಿದ್ದವು. ಮೆಟ್ಟಿಲುಗಳು ಕುಸಿದಿದ್ದವು. ವೀಕ್ಷಣಾ ಗೋಪುರವೂ ನಿರ್ವಹಣೆಯಿಲ್ಲದೇ ಕಳೆಗುಂದಿತ್ತು.

ಹೆಚ್ಚಿನ ನಿರೀಕ್ಷೆಯಲ್ಲಿ ಬರುತ್ತಿದ್ದ ಪ್ರವಾಸಿಗರು, ಇಲ್ಲಿನ ಅವ್ಯವಸ್ಥೆಗಳನ್ನು ನೋಡಿ ಬೇಸರಗೊಳ್ಳುತ್ತಿದ್ದರು. ಈ ನಡುವೆ, ತಾಣವನ್ನು ಸುಂದರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರಿಂದ ಜಿಲ್ಲಾಡಳಿತಕ್ಕೆ ಮನವಿಗಳು, ಒತ್ತಾಯಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದರು.

ADVERTISEMENT

ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅನುದಾನದಿಂದ ₹ 20 ಲಕ್ಷವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯ ಸರಣಿಯಲ್ಲಿ ಜೇನುಕಲ್ಲು ಗುಡ್ಡದ ಪ್ರದೇಶವನ್ನೂ ಮರು ವಿನ್ಯಾಸ ಮಾಡಿ ಸುಂದರಗೊಳಿಸಲಾಗಿದೆ.

ಮಳೆಗಾಲ ಹಚ್ಚ ಹಸುರಿನ ನಡುವೆ ಕಣ್ಣು ಹಾಯಿಸಿದಷ್ಟೂ ದೂರ ಕಂಗೊಳಿಸುವ ದಟ್ಟವಾದ ಕಾಡು, ಬೆಟ್ಟಗಳನ್ನು ದಾಟಿ ಸಾಗುವ ಮೋಡಗಳ ಸಾಲು, ಮಳೆ ಬಂದು ನಿಂತಾಗ ಉಂಟಾಗುವ ಮಂಜು ಕವಿದ ವಾತಾವರಣವನ್ನು ಕಣ್ತುಂಬಿಕೊಳ್ಳಲು ಬರುವವರಿಗೆ ಈಗ ಈ ತಾಣ ಮತ್ತಷ್ಟು ಉಲ್ಲಾಸ ನೀಡಲಿದೆ.

ನಿರ್ವಹಣೆ ವಿ.ಎಫ್.ಸಿ ಹೊಣೆ:

‘ಜೇನುಕಲ್ಲು ಗುಡ್ಡವನ್ನು ತಜ್ಞ ವಿನ್ಯಾಸಕಾರರಿಂದ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಮೊದಲು ಟಿಕೆಟ್ ಕೌಂಟರ್‌, ಗುಡ್ಡದ ಅಂಚಿನಲ್ಲಿ ರಕ್ಷಣೆ ಇರಲಿಲ್ಲ. ಮೆಟ್ಟಿಲುಗಳು, ರೇಲಿಂಗ್ಸ್, ವೀಕ್ಷಣಾ ಗೋಪುರವನ್ನು ನವೀಕರಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು, ನೆಲಕ್ಕೆ ಇಂಟರ್‌ಲಾಕ್‌ಗಳು, ಪ್ರವೇಶದ್ವಾರ ಹಾಗೂ ನಾಮಫಲಕ ಅಳವಡಿಕೆ, ವೀಕ್ಷಣಾ ಸ್ಥಳದಲ್ಲಿ ಆಸನಗಳನ್ನು ಅಳವಡಿಸಲಾಗಿದೆ’ ಎಂದರು.

‘ತಾಣವನ್ನು ಗ್ರಾಮ ಅರಣ್ಯ ಸಮಿತಿಯು (ವಿ.ಎಫ್.ಸಿ) ನಿರ್ವಹಣೆ ಮಾಡಲಿದ್ದು, ಪ್ರವಾಸಿಗರಿಗೆ ಪ್ರವೇಶ ಶುಲ್ಕ ಪಡೆದುಕೊಳ್ಳಲಿದೆ. ಸುಂದರ ಪ್ರದೇಶದ ಸೌಂದರ್ಯವನ್ನು ಸಹಜವಾಗಿ ಅನುಭವಿಸಿ, ಅದರ ಸೌಂದರ್ಯ ಕಾಪಾಡಬೇಕು. ಇದು ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಜವಾಬ್ದಾರಿಯಾಗಿದೆ. ಇದೇ ರೀತಿ ವಿವಿಧ ತಾಣಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

****

* ಜೇನುಕಲ್ಲು ಗುಡ್ಡದ ಅಂಚಿಗೆ ಬೇಲಿ ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಯಾರೂ ಅದನ್ನು ದಾಟಬಾರದು. ಈ ಬಗ್ಗೆ ವಿ.ಎಫ್.ಸಿ.ಗೂ ಸೂಚಿಸಲಾಗುವುದು.

– ಪ್ರಿಯಾಂಗಾ.ಎಂ, ಜಿ.ಪಂ ಸಿ.ಇ.ಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.