ADVERTISEMENT

‘ಮಾದಕ ವಸ್ತು ಪ್ರಕರಣ; ತನಿಖೆ ಹಂತದಲ್ಲಿದೆ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 11:54 IST
Last Updated 26 ಜುಲೈ 2021, 11:54 IST
ಹೊಸಪೇಟೆ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕಗೊಂಡ ವಿಶ್ವನಾಥ್‌ ರಾವ್‌ ಕುಲಕರ್ಣಿ ಅವರಿಗೆ ನಿರ್ಗಮಿತ ಡಿವೈಎಸ್ಪಿ ವಿ. ರಘುಕುಮಾರ ಸೋಮವಾರ ಅಧಿಕಾರ ಹಸ್ತಾಂತರಿಸಿದರು
ಹೊಸಪೇಟೆ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕಗೊಂಡ ವಿಶ್ವನಾಥ್‌ ರಾವ್‌ ಕುಲಕರ್ಣಿ ಅವರಿಗೆ ನಿರ್ಗಮಿತ ಡಿವೈಎಸ್ಪಿ ವಿ. ರಘುಕುಮಾರ ಸೋಮವಾರ ಅಧಿಕಾರ ಹಸ್ತಾಂತರಿಸಿದರು   

ಹೊಸಪೇಟೆ (ವಿಜಯನಗರ): ‘ಮಾದಕ ವಸ್ತು ಸಾಗಾಣಿಕೆಗೆ ಸಂಬಂಧಿಸಿದ ಪ್ರಕರಣ ತನಿಖೆಯ ಹಂತದಲ್ಲಿದೆ. ತನಿಖೆ ನಡೆಯುವಾಗ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ’ ಎಂದು ನಿರ್ಗಮಿತ ಡಿವೈಎಸ್ಪಿ ವಿ. ರಘುಕುಮಾರ ಹೇಳಿದರು.

ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕಗೊಂಡ ವಿಶ್ವನಾಥ್‌ ರಾವ್‌ ಕುಲಕರ್ಣಿ ಅವರಿಗೆ ಸೋಮವಾರ ಮಧ್ಯಾಹ್ನ ರಘುಕುಮಾರ ಅವರು ಅಧಿಕಾರ ವಹಿಸಿದರು. ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಶೆ ಮಾತ್ರ ಸಾಗಾಣಿಕೆಗೆ ಸಂಬಂಧಿಸಿದಂತೆ ಈಗಾಗಲೇ ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅದರ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ನನ್ನ ಎರಡು ವರ್ಷಗಳ ಅವಧಿಯಲ್ಲಿ ಉಪವಿಭಾಗ ವ್ಯಾಪ್ತಿಯಲ್ಲಿ 131.45 ಕೆ.ಜಿ. ಗಾಂಜಾ ವಪಡಿಸಿಕೊಳ್ಳಲಾಗಿದೆ. 123 ಜೂಜಾಟ ಪ್ರಕರಣ ದಾಖಲಿಸಿ, ₹9.38 ಲಕ್ಷ, 875 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದೇ ರೀತಿ 104 ಮಟ್ಕಾ ಪ್ರಕರಣ ದಾಖಲಿಸಿ, ₹1.72 ಲಕ್ಷ ವಶಕ್ಕೆ ಪಡೆಯಲಾಗಿದೆ. ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ₹76,580 ನಗದು, 19 ಜನರನ್ನು ದಸ್ತಗಿರಿ ಮಾಡಲಾಗಿದೆ. ಕಳವು, ಸರಗಳವು ಸೇರಿದಂತೆ ಒಟ್ಟು 1,218 ಪ್ರಕರಣಗಳಲ್ಲಿ 735 ಇತ್ಯರ್ಥಗೊಂಡಿವೆ’ ಎಂದು ರಘುಕುಮಾರ ವಿವರಿಸಿದರು.

‘ಅಕ್ರಮ ಮರಳಿನ ದಂಧೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆ. 38 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮದ್ಯಕ್ಕೆ ಸಂಬಂಧಿಸಿ 43 ಪ್ರಕರಣ ದಾಖಲಿಸಿ ₹2.65 ಲಕ್ಷ ಮದ್ಯ ವಶಕ್ಕೆ ಪಡೆಯಲಾಗಿದೆ. ರಸ್ತೆ ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಾಖಲಿಸಿ ₹2.65 ಕೋಟಿ ದಂಡದ ಹಣ ಸಂಗ್ರಹಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.