ADVERTISEMENT

ಪರಿಶಿಷ್ಟ ಪಂಗಡಗಳ ಹಾಸ್ಟೆಲ್‌ನಲ್ಲಿ ಚಿಕನ್ ತಿಂದು 28 ವಿದ್ಯಾರ್ಥಿನಿಯರು ಅಸ್ವಸ್ಥ

ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 8:23 IST
Last Updated 10 ಆಗಸ್ಟ್ 2023, 8:23 IST
 ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಡಿಎಚ್‌ಒ ಡಾ.ಸಲೀಂ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಡಿಎಚ್‌ಒ ಡಾ.ಸಲೀಂ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು.   

ಹೊಸಪೇಟೆ (ವಿಜಯನಗರ): ಇಲ್ಲಿನ ಜಂಬುನಾಥ ರಸ್ತೆಯ ಪರಿಶಿಷ್ಟ ಪಂಗಡದವರ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಬುಧವಾರ ರಾತ್ರಿ ಚಿಕನ್‌ ತಿಂದ 28 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

ಹಾಸ್ಟೆಲ್‌ನಲ್ಲಿ ಎಂದಿನಂತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಬಡಿಸಲಾಗಿತ್ತು. ಚಿಕನ್‌ ಸೇವಿಸಿದ 28 ವಿದ್ಯಾರ್ಥಿನಿಯರು ಮಧ್ಯರಾತ್ರಿ 2 ಗಂಟೆಯ ವೇಳೆಗೆ ವಾಂತಿ, ಭೇದಿ, ಹೊಟ್ಟೆನೋವಿನಿಂದ ಬಳಲಿದರು. ತಕ್ಷಣ ಅವರನ್ನು ಇಲ್ಲಿನ 100 ಹಾಸಿಗೆಗಳ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು.

ಗುರುವಾರ ಬೆಳಿಗ್ಗೆ ಮತ್ತೆ ಆರು ಮಂದಿಗೆ ಇದೇ ತೊಂದರೆ ಕಾಣಿಸಿಕೊಂಡಿದ್ದು, ಹಾಸ್ಟೆಲ್ ನಲ್ಲೇ ನಿಗಾ ವಹಿಸಲಾಗಿದೆ.

ADVERTISEMENT

ಸದ್ಯ ಎಲ್ಲಾ  ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ. ಫುಡ್‌ ಪಾಯಿಸನ್‌ನಿಂದ ಈ ರೀತಿಯ ತೊಂದರೆ ಆಗಿರಬೇಕು ಎಂದು ಶಂಕಿಸಾಗಿದೆ.

ಹಾಸ್ಟೆಲ್‌ನ ನೀರು ಶುದ್ಧೀಕರಣ ಘಟಕ ಕೆಟ್ಟುಹೋಗಿದೆ ಎಂದು ಹೇಳಲಾಗಿದೆ. ಹಾಸ್ಟೆಲ್‌ನಲ್ಲಿನ 17 ಮಂದಿ ವಿದ್ಯಾರ್ಥಿನಿಯರು ಕೇವಲ ಸಸ್ಯಾಹಾರ ಊಟ ಮಾಡಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ.

ಜಮೀರ್ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಡಿಎಚ್‌ಒ ಡಾ.ಸಲೀಂ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು.

‘ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ. ಒಂದು ಆಂಬುಲೆನ್ಸ್‌ ಅನ್ನು ಹಾಸ್ಟೆಲ್‌ ಆವರಣದಲ್ಲಿ ಇರಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಈ  ಘಟನೆಯ ಬಗ್ಗೆ ಉಪವಿಭಾಗಾಧಿಕಾರಿ ಅವರಿಂದ ತನಿಖೆಗೆ ಆದೇಶ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.