ADVERTISEMENT

ಹೊಸಪೇಟೆ | ಮೀಸಲಾತಿ ರದ್ದತಿ; ಮುಸ್ಲಿಮರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 9:09 IST
Last Updated 28 ಮಾರ್ಚ್ 2023, 9:09 IST
   

ಹೊಸಪೇಟೆ (ವಿಜಯನಗರ): ಪ್ರವರ್ಗ 2ಬಿ ಅಡಿ ಮುಸ್ಲಿಂ ಸಮುದಾಯವರಿಗೆ ನೀಡಲಾಗುತ್ತಿದ್ದ ಮೀಸಲಾತಿ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಅಂಜುಮನ್‌–ಖಿದ್ಮತೆ–ಇ–ಇಸ್ಲಾಂ ಸಂಘಟನೆಯ ನೇತೃತ್ವದಲ್ಲಿ ಮುಸ್ಲಿಮರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ಕಚೇರಿ ಬಳಿ ಸೇರಿದ ನೂರಾರು ಜನ ನಗರದ ಪ್ರಮುಖ ಮಾರ್ಗಗಳ ಮೂಲಕ ತಹಶೀಲ್ದಾರ್‌ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿ, ಮೀಸಲಾತಿ ರದ್ದುಗೊಳಿಸಿರುವ ಆದೇಶ ಹಿಂಪಡೆದು, ಅದನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿದರು.

ಅಂಜುಮನ್‌ ಸಂಘಟನೆಯ ಅಧ್ಯಕ್ಷ ಮಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಪಡಿಸಿರುವುದು ಖಂಡನಾರ್ಹ. ಇದು ಅಸಂವಿಧಾನಿಕ ನಡೆ. ಇದು ಒಂದು ನಿರ್ದಿಷ್ಟ ಸಮುದಾಯದ ಮೇಲಿನ ದಾಳಿ. ಮುಸ್ಲಿಂ ಸಮಾಜ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿಯೇ 2ಬಿ ಅಡಿ ಮೀಸಲಾತಿ ಕಲ್ಪಿಸಲಾಗಿತ್ತು. ಅದನ್ನು ಕಸಿದುಕೊಂಡಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.

ADVERTISEMENT

ಮುಸ್ಲಿಂ ಸಮಾಜದ ಅಭಿವೃದ್ಧಿ, ಮುಖ್ಯವಾಹಿನಿಗೆ ಬರದಂತೆ ತಡೆಯುವ ಹುನ್ನಾರವಿದು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಬಿಜೆಪಿ ಸರ್ಕಾರ ತನ್ನ ರಹಸ್ಯ ಕಾರ್ಯಸೂಚಿ ಜಾರಿಗೊಳಿಸುವ ಉದ್ದೇಶದಿಂದ ಕುತಂತ್ರ ಮಾಡುತ್ತಿದೆ. ಆದರೆ, ಇದು ಫಲ ನೀಡುವುದಿಲ್ಲ. ಸರ್ಕಾರ ಕೂಡಲೇ ರದ್ದುಗೊಳಿಸಿರುವ ಮೀಸಲಾತಿಯನ್ನು ಪುನರ್‌ ಸ್ಥಾಪಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಸದಸ್ಯ ಖಾದರ್‌ ರಫಾಯ್‌ ಮಾತನಾಡಿ, ವ್ಯವಸ್ಥಿತವಾಗಿ ಮುಸ್ಲಿಂ ಸಮಾಜದವರನ್ನು ಕೆಣಕಲಾಗುತ್ತಿದೆ. ಅವರ ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡಿ, ಅವಹೇಳನ ಮಾಡಲಾಗುತ್ತಿದೆ. ಜಟಕಾ, ಹಿಜಾಬ್‌, ಆಜಾನ್‌ ಹೀಗೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಇದನ್ನು ಸಮಾಜ ಸಹಿಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡಲಾಗುವುದು ಎಂದು ಹೇಳಿದರು.

ಮಹಮ್ಮದ್‌ ನಿಯಾಜಿ, ಸೈಯ್ಯದ್‌ ಮಹಮ್ಮದ್‌, ಅಬ್ದುಲ್‌, ರೆಹಮಾನ್‌ ಪಾಶಾ, ಜಾಫರ್‌, ರಹೀಮ್‌, ಅಬ್ದುಲ್‌ ಖದೀರ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.