ಹರಪನಹಳ್ಳಿ: ಅಸಲಿ ಚಿನ್ನ ಕೊಡುವುದಾಗಿ ನಂಬಿಸಿ ನಕಲಿ ಬಂಗಾರ ಕೊಟ್ಟು ₹8 ಲಕ್ಷ ಹಣ ವಂಚಿಸಿರುವ ಘಟನೆ ಮೇ 21ರಂದು ನೀಲಗುಂದ ಕ್ರಾಸ್ ಬಳಿ ಜರುಗಿದೆ.
ತುಮಕೂರಿನ ರಘುನಂದನ್ ಟಿ.ಎಂ. ಹಣ ಕಳೆದುಕೊಂಡವರು.
ಆರೋಪಿಗಳಾದ ರಮೇಶ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಹಾಗೂ ಮತ್ತೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ.
‘ಪಾವಗಡದಲ್ಲಿ ರಮೇಶ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯು, ರಘುನಂದನ್ ಅವರಿಗೆ ಕರೆ ಮಾಡಿ ನಮ್ಮ ಮನೆ ಪಾಯ ತೆಗೆಯುವಾಗಿ ಸಾಕಷ್ಟು ಬಂಗಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಕೊಡುತ್ತೇವೆ. 1 ಕೆ.ಜಿ. ಬಂಗಾರಕ್ಕೆ ₹10 ಲಕ್ಷ ಆಗುತ್ತದೆ ಎಂದು ನಂಬಿಸಿದ್ದ. ಇದನ್ನು ನಂಬಿದ ರಘುನಂದನ್ ಅವರು ತಮ್ಮ ಸ್ನೇಹಿತ ವೆಂಕಟ ರೆಡ್ಡಿ ಎಂಬವರನ್ನು ಕರೆದುಕೊಂಡು ಬಂದು ನೀಲಗುಂದ ಕ್ರಾಸ್ ಬಳಿ ನಿಂತಿದ್ದಾಗ ಅಸಲಿ ಚಿನ್ನದ ಬಿಲ್ಲೆ ಕೊಟ್ಟು ಪರೀಕ್ಷಿಸಲು ತಿಳಿಸಿದರು. ಅದನ್ನು ಪರಿಶೀಲಿಸಿದಾಗ ಬಂಗಾರವೇ ಆಗಿತ್ತು. ಪುನಃ ಅದೇ ಸ್ಥಳಕ್ಕೆ ಹೋಗಿ ₹8 ಲಕ್ಷ ಕೊಟ್ಟು 1 ಕೆ.ಜಿ.ಯಷ್ಟು ತೂಕವಿದ್ದ ಚೀಲ ಪಡೆದುಕೊಂಡರು. ಅದರೊಳಗಿನ ಬಂಗಾರ ಪರೀಕ್ಷೆಗೆ ಒಳಪಡಿಸಿದಾಗ ನಕಲಿ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ರಘುನಂದನ್ ಹೇಳಿಕೆ ಆಧರಿಸಿ ಸ್ಥಳೀಯ ಠಾಣೆಯಲ್ಲಿ ಮೇ 25ರಂದು ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.