ADVERTISEMENT

ಹರಕೆ ಹೊತ್ತ ಭಕ್ತರಿಂದ ಅಗ್ನಿಕುಂಡ ಪ್ರವೇಶ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 16:24 IST
Last Updated 21 ಮಾರ್ಚ್ 2024, 16:24 IST
ಕೊಟ್ಟೂರಿನ ಕೋಟೆ ಪೂರ್ವ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಗುರುವಾರ ಹರಕೆ ಹೊತ್ತ ಭಕ್ತರು ಅಗ್ನಿಕುಂಡದಲ್ಲಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು 
ಕೊಟ್ಟೂರಿನ ಕೋಟೆ ಪೂರ್ವ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಗುರುವಾರ ಹರಕೆ ಹೊತ್ತ ಭಕ್ತರು ಅಗ್ನಿಕುಂಡದಲ್ಲಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು    

ಕೊಟ್ಟೂರು: ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಪೂರ್ವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಗದ್ಗುರು ರೇಣುಕ ಭಗವತ್ಪಾದರ ಹಾಗೂ ವೀರಭದ್ರೇಶ್ವರ ಸ್ವಾಮಿ ಜೋಡಿ ರಥೋತ್ಸವ  ಶುಕ್ರವಾರ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಗಿನ ಜಾವ ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಂತೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಸಕಲ ಮಂಗಲವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಗಂಗಾಪೂಜೆ ನೆರವೇರಿಸಲಾಯಿತು.

ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿಕುಂಡಕ್ಕೆ ಪೂಜೆ ನೆರವೇರಿಸುತ್ತಿದ್ದಂತೆ ಹರಕೆ ಹೊತ್ತ ಭಕ್ತರು ತಮ್ಮ ಹರಕೆಯನ್ನು ತೀರಿಸಲು ಪುರವಂತರಿಂದ ಬಾಯಿ,ಕೈಗಳಿಗೆ ಶಸ್ತ್ರಗಳಿಂದ ಚುಚ್ಚಿಸಿಕೊಂಡು ಅಗ್ನಿಕುಂಡ ಪ್ರವೇಶಿಸುವ ಮುಖಾಂತರ ತಮ್ಮ ಭಕ್ತಿ ಸಮರ್ಪಿಸಿದರು.

ADVERTISEMENT

ಗುಗ್ಗಳ ಕಾರ್ಯಕ್ರಮದ ನಂತರ ರುದ್ರಭೋಜನ ಹಾಗೂ ನೆರದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. 22 ರಂದು ಶುಕ್ರವಾರ ಬೆಳಿಗ್ಗೆ ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಯ ವಿವಾಹ ಹಾಗೂ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ ಸಂಜೆ ಜೋಡಿ ರಥೋತ್ಸವ ಜರುಗಲಿವೆ. 23 ರಂದು ಶನಿವಾರ ರಾತ್ರಿ ಮದಾಲ್ಸಿ ಕಾರ್ಯಕ್ರಮದೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.