ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಗುಂದಿ ಗ್ರಾಮದ ಮೋರಿಗೇರಿ ರಸ್ತೆಯ ಕೆಇಬಿ ಸಬ್ ಸ್ಟೇಷನ್ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಇಬ್ಬರನ್ನು ಬಲಿ ಪಡೆದಿದೆ. ಘಟನಾ ಸ್ಥಳಕ್ಕೆ ಶನಿವಾರ ಎಸ್‌ಪಿ ಎಸ್.ಜಾಹ್ನವಿ ಭೇಟಿ ನೀಡಿ ಪರಿಶೀಲಿಸಿದರು.
ಡಿಕ್ಕಿ ಹೊಡೆದ ವಾಹನವನ್ನು ಪತ್ತೆಹಚ್ಚುವ ಪ್ರಯತ್ನ ಆರಂಭವಾಗಿದೆ ಎಂದು ಅವರು ಬಳಿಕ ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಗದ್ದಿಕೇರಿ ಗ್ರಾಮದ ಸುಗ್ಗೇನಹಳ್ಳಿ ಬಸವ ರೆಡ್ಡಿ (54), ಸುಗ್ಗೇನಹಳ್ಳಿ ಹನುಮರೆಡ್ಡಿ (64) ಅಪಘಾತದಲ್ಲಿ ಮೃತಪಟ್ಟಿದ್ದರು.
ಹೂವಿನಹಡಗಲಿಯಿಂದ ಸ್ವಗ್ರಾಮ ಗದ್ದಿಕೇರಿಗೆ ಇವರಿಬ್ಬರು ತೆರಳುತ್ತಿದ್ದಾಗ ರಾತ್ರಿ 9.45ರ ಸುಮಾರಿಗೆ ಅಪರಿಚಿತ ವಾಹನ ಇವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅತೀ ವೇಗದಲ್ಲಿದ್ದ ವಾಹನ ಅಪ್ಪಳಿಸಿರುವ ರಭಸಕ್ಕೆ ಬೈಕ್ ಸವಾರರೊಬ್ಬರ ತಲೆ ಛಿದ್ರವಾಗಿತ್ತು ಮತ್ತು ಇನ್ನೊಬ್ಬರ ಕಾಲು ದೇಹದಿಂದ ಬೇರ್ಪಟ್ಟಿತ್ತು ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.