ಹೊಸಪೇಟೆ (ವಿಜಯನಗರ): ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶಕ್ಕೆ ನಗರ ಸಜ್ಜಾಗಿರುವಂತೆಯೇ ಜಾತಿ ನಿಂದನೆಯ ಬಿರುಗಾಳಿ ಎದ್ದಿದ್ದು, ಮಾದಿಗ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆನ್ನಲಾದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರ ಕ್ಷಮೆಗೆ ಸಮುದಾಯದವರು ಪಟ್ಟು ಹಿಡಿದಿದ್ದಾರೆ.
‘ಕಮಲಾಪುರದಲ್ಲಿ ಮಾದಿಗ ಸಮುದಾಯದ ಮುಖಂಡ ಸೋಮಶೇಖರ್ ಅವರ ಮಗನ ಮದುವೆಗೆ ಹೋಗಿದ್ದು ಏಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಕೇಳುವ ಮೂಲಕ ಭೀಮಾ ನಾಯ್ಕ್ ಸಮುದಾಯವನ್ನು ಅವಮಾನಿಸಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳದಿದ್ದರೆ ಇದೇ 20ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ವೇದಿಕೆ ಏರಲು ಬಿಡುವುದಿಲ್ಲ, ಜತೆಗೆ ನಾವೆಲ್ಲರೂ ಸಮಾವೇಶವನ್ನು ಬಹಿಷ್ಕರಿಸಲಿದ್ದೇವೆ’ ಎಂದು ಜಿಲ್ಲಾ ಮಾದಿಗ ಮಹಾಸಭಾದ ಮುಖಂಡ ಎಂ.ಸಿ.ವೀರಸ್ವಾಮಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಸಮುದಾಯದ ಮುಖಂಡರಾದ ಕೊಟಗಿನಾಳ ಮಲ್ಲಿಕಾರ್ಜುನ, ನಿಂಬಗಲ್ ರಾಮಕೃಷ್ಣ, ಮಾರೆಣ್ಣ ಅವರು ಸಹ ಮಾತನಾಡಿ, ಭೀಮಾ ನಾಯ್ಕ್ ಅವರ ಕ್ಷಮೆಗೆ ಒತ್ತಾಯಿಸಿದರು.
ನಿರಾಕರಣೆ: ಆದರೆ ಈ ಆರೋಪವನ್ನು ನಿರಾಕರಿಸಿರುವ ಭೀಮಾ ನಾಯ್ಕ್, ‘ನಾನು ಕಮಲಾಪುರದಲ್ಲಿ ನಡೆದ ಮದುವೆಗೆ ಹೋಗಿಯೇ ಇಲ್ಲ. ಸೋಮಶೇಖರ್ ಯಾವ ಸಮುದಾಯಕ್ಕೆ ಸೇರಿದವರು ಎಂಬುದೂ ನನಗೆ ಗೊತ್ತಿರಲಿಲ್ಲ. ನಾನು ಪ್ರವಾಸಿ ಮಂದಿರದಲ್ಲಿ ನಡೆದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಗೆ ಮಾತ್ರ ಹೋಗಿದ್ದೆ. ಅಲ್ಲಿ ಸಹ ನಾನು ಯಾವ ಜಾತಿಯನ್ನೂ ಉಲ್ಲೇಖಿಸಿ ಸಚಿವರೊಂದಿಗೆ ಮಾತನಾಡಿಲ್ಲ, ಮಾದಿಗ ಸಮುದಾಯದವರ ಮದುವೆಗೆ ಯಾಕೆ ಹೋಗಿದ್ದೀರಿ ಎಂದು ಸಚಿವರಲ್ಲಿ ಕೇಳಿಯೇ ಇಲ್ಲ, ನಾನೇಕೆ ಜಾತಿಯನ್ನು ಉಲ್ಲೇಖಿಸಿ ಮಾತನಾಡಲಿ, ಯಾರಾದರೂ ಜಾತಿ ಹೆಸರೇಳಿ ಮಾತನಾಡ್ತಾರಾ?’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಮಾಡುತ್ತಿದ್ದಾರೆ, ಅಧ್ಯಕ್ಷ ಸ್ಥಾನದಿಂದ ಅವರನ್ನು ತೆಗೆಯುತ್ತಾರೆ ಎಂಬ ಆತಂಕದಲ್ಲಿ ಅವರು ಈ ಕೆಲಸ ಮಾಡುತ್ತಿದ್ದಾರೆ. ಬಂಜಾರಾ ಮತ್ತು ಮಾದಿಗ ಸಮುದಾಯದ ನಡುವೆ ಅನ್ಯೋನ್ಯ ಸಂಬಂಧ ಇದೆ. ಒಂದು ವೇಳೆ ನಾನು ಜಾತಿ ಹೆಸರು ಹೇಳಿ ಸಮುದಾಯವನ್ನು ಅವಮಾನಿಸಿದ್ದೇನೆ ಎಂಬುದಕ್ಕೆ ಪುರಾವೆ ನೀಡಿದರೆ ಈಗಲೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ’ ಎಂದು ಸವಾಲು ಹಾಕಿದರು.
‘ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಇರಲಿಲ್ಲ, ಅವರೇಕೆ ಇಲ್ಲ ಎಂದು ಸಚಿವರು ಕೇಳಿದಾಗ, ನೀವು ಬಿಜೆಪಿಯವರ ಮದುವೆಗೆ ಹೋಗಿದ್ದೀರಂತೆ ಎಂದು ಹೇಳಿ ಅವರು ಬೇಸರ ಮಾಡಿಕೊಂಡು ಹೊರಟು ಹೋದರು ಎಂದು ಇಲ್ಲಿ ಆಡಿಕೊಳ್ಳುತ್ತಿದ್ದಾರೆ ಎಂದಷ್ಟೇ ನಾನು ಹೇಳಿದೆ, ಅದರ ಹೊರತಾಗಿ ನಾನು ಬೇರೆ ಏನನ್ನೂ ಹೇಳಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಕ್ಷಮೆ ಕೇಳಲ್ಲ: ‘ನಾನು ಯಾರ ಕ್ಷಮೆ ಕೇಳಲ್ಲ, ಏನೂ ಹೇಳದೆ ಇದ್ದ ಮೇಲೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಸಾಧನಾ ಸಮಾವೇಶಕ್ಕೆ ಬಂದೇ ಬರುತ್ತೇನೆ’ ಎಂದು ಭೀಮಾ ನಾಯ್ಕ್ ತಿಳಿಸಿದರು.
ಹಿನ್ನೆಲೆ: ಕಮಲಾಪುರದ ರೈತ ಭವನದಲ್ಲಿ ಬುಧವಾರ ಸೋಮಶೇಖರ್ ಅವರ ಮಗನ ಮದುವೆ ಇತ್ತು. ಸೋಮಶೇಖರ್ ಅವರು ಈ ಹಿಂದೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು ಹಾಗೂ ಎಪಿಎಂಸಿ ಅಧ್ಯಕ್ಷರೂ ಆಗಿದ್ದರು. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಅವರು ಈಚೆಗೆ ತಮ್ಮ ಬೆಂಬಲಿಗರೊಂದಿಗೆ ಕೆಪಿಸಿಸಿ ಜಿಲ್ಲಾ ಉಸ್ತುವಾರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಅವರ ಮಗನ ಮದುವೆಗೆ ಹೋಗಬಾರದಿತ್ತು ಎಂಬ ಅರ್ಥದಲ್ಲಿ ಭೀಮಾ ನಾಯ್ಕ್ ಮಾತನಾಡಿದ್ದಾರೆ ಎಂಬುದು ಮಾದಿಗ ಸಮುದಾಯದವರ ಆರೋಪವಾಗಿದೆ.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರು ಹೇಳಿದ್ದರಿಂದಲೇ ಸಚಿವರು ಈ ಮದುವೆಗೆ ಹೋದರು ಎಂಬ ಅರ್ಥದಲ್ಲಿ ಭೀಮಾ ನಾಯ್ಕ್ ಪ್ರವಾಸಿ ಮಂದಿರದಲ್ಲಿ ನಡೆದ ಸಾಧನಾ ಸಮಾವೇಶದ ಪೂರ್ವಸಿದ್ಧತಾ ಸಭೆಯ ವೇಳೆ ಮಾತನಾಡಿದ್ದರು, ಅದರಿಂದ ಸಿಟ್ಟಿಗೆದ್ದ ಶೇಖ್ ಸಭೆ ಬಹಿಷ್ಕರಿಸಿ ಹೊರನಡೆದಿದ್ದರು ಎಂದು ಹೇಳಲಾಗಿದೆ. ಬಳಿಕ ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ನಿಂಬಗಲ್ ಅವರ ಮನೆಗೆ ಸಚಿವ ಜಮೀರ್ ಊಟಕ್ಕೆ ಹೋಗಿದ್ದಾಗ ಅಲ್ಲಿ ಸೇರಿದ್ದ ನೂರಾರು ಮಂದಿ ತಮ್ಮ ಸಮುದಾಯಕ್ಕೆ ಆಗಿದ್ದ ಅವಮಾನವನ್ನು ಸಚಿವರ ಬಳಿ ಹೇಳಿಕೊಂಡಿದ್ದರು. ಸಾಧನಾ ಸಮಾವೇಶದ ವೇಳೆ ಇದೆಲ್ಲವನ್ನು ತಲೆಗೆ ಹಚ್ಚಿಕೊಳ್ಳಬೇಡಿ, ಎಲ್ಲರೂ ಒಗ್ಗಟ್ಟಿನಿಂದ ಸಮಾವೇಶ ಯಶಸ್ವಿಗೊಳಿಸಲು ಶ್ರಮಿಸಿ ಎಂದು ಸಚಿವರು ಮನವಿ ಮಾಡಿದ್ದರು.
‘ನನ್ನನ್ನು ಪಕ್ಷದಿಂದ ತೆಗೆಯಲು ಇವರು ಯಾರು?’
‘ನಾನು ಮಾದಿಗ ಸಮುದಾಯದವರನ್ನು ಭೀಮಾ ನಾಯ್ಕ್ ವಿರುದ್ಧ ಎತ್ತಿಕಟ್ಟುವ ಪ್ರಶ್ನೆಯೇ ಇಲ್ಲ. ನಾನೊಬ್ಬ ಮುಸ್ಲಿಂ ಸಮುದಾಯದವ. ಮಾದಿಗ ಸಮುದಾಯದವರು ನನ್ನ ಮಾತು ಕೇಳುತ್ತಾರೆಯೇ? ನನ್ನ ಜಿಲ್ಲಾ ಅಧ್ಯಕ್ಷ ಸ್ಥಾನ ಹೋಗುತ್ತದೆ ಎಂದು ಹೇಳಲು ಇವರು ಯಾರು? ಎಐಸಿಸಿ ಅಧ್ಯಕ್ಷರೇ, ಕೆಪಿಸಿಸಿ ಅಧ್ಯಕ್ಷರೇ? ತಮ್ಮ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಮಾದಿಗರಿಗಾಗಿ ಒಂದಿಷ್ಟೂ ಕೆಲಸ ಮಾಡದ ಕಾರಣ ಭೀಮಾ ನಾಯ್ಕ್ ಕಳೆದ ಬಾರಿ ಸೋತಿದ್ದಾರೆ, ಇದೀಗ ಮಾದಿಗರನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.