ಹರಪನಹಳ್ಳಿ: ಜಿಲ್ಲೆಯ ಸಿ ಗ್ರೇಡ್ ಶಾಲೆಗಳ ಬಲವರ್ಧನೆಗೊಳಿಸುವುದು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆಯ ಆರು ತಂಡಗಳು ಶಾಲೆಗಳಿಗೆ ಗುರುವಾರ ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದವು.
ಉಪನಿರ್ದೇಶಕಿ ಹನುಮಕ್ಕ ನೇತೃತ್ವದ ಜಿಲ್ಲಾ ತಂಡ, ಹೂವಿನ ಹಡಗಲಿ ಬಿಇಒ ಮಹೇಶ್ ಪೂಜಾರ, ಹರಪನಹಳ್ಳಿ ಬಿಇಒ ಯು.ಬಸವರಾಜಪ್ಪ, ಹೊಸಪೇಟೆ ಚನ್ನಬಸಪ್ಪ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣ ಅಧಿಕಾರಿ ಶೇಖರಪ್ಪ, ಹಗರಿಬೊಮ್ಮನಹಳ್ಳಿಯ ಮೈಲೇಶ್ ಪೂಜಾರ, ಕೂಡ್ಲಿಗಿಯ ಪದ್ಮನಾಬ್ ಕರ್ಣಂ ಅವರ ತಂಡಗಳು ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ತಾಲ್ಲೂಕಿನ 15 ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಶಾಲೆಯ ಸೌಲಭ್ಯಗಳು, ಕಲಿಕೆಯಲ್ಲಿ ಹಿಂದುಳಿದಿರುವಿಕೆಗೆ ಕಾರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಹನುಮಕ್ಕ ಮಾತನಾಡಿ, ‘ಶೀಘ್ರವೇ ವರದಿಯನ್ನು ವಿಭಾಗ ಮಟ್ಟದ ಅಧಿಕಾರಿಗಳಿಗೆ ಕಳಿಸಲಾಗುತ್ತದೆ. ಶಾಲೆಗಳಲ್ಲಿ ತಾಯಂದಿರ ಸಭೆ, ಪೋಷಕರ ಸಭೆ ಕರೆದು ಮಕ್ಕಳ ಕಲಿಕೆ ಪ್ರೋತ್ಸಾಹಕ್ಕೆ ಕ್ರಮ ಜರುಗಿಸಲು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಯೋಜನೆಯಡಿ ‘ಕಲಿಕಾಸರೆ’ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ಪುಸ್ತಕ ನಮ್ಮ ಜಿಲ್ಲೆಗೂ ಪೂರೈಕೆ ಆಗಲಿದೆ’ ಎಂದು ಹೇಳಿದರು.
‘ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಪ್ರತಿ ವಾರವೂ ಕ್ಷೇತ್ರ ಪರಿಚಯಿಸುವ ವಿದ್ಯಾರ್ಥಿ ವಿಹಾರ, ಸರಣಿ ಪರೀಕ್ಷೆ ರೂಪಿಸಲು ಸೂಚಿಸಲಾಗಿದೆ. ಶಾಲಾ ದತ್ತು ಯೋಜನೆ ಸಹ ಚಾಲ್ತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.