ADVERTISEMENT

ಧಾರಾಕಾರ ಮಳೆ; ಕೃಷಿ ಚಟುವಟಿಕೆಗೆ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 17:02 IST
Last Updated 12 ಮೇ 2022, 17:02 IST
   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದ ಪರಿಣಾಮ ಮುಂಗಾರು ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸಲು ರೈತರಿಗೆ ಅನುಕೂಲವಾಗಿದೆ.

ವಿಜಯಪುರ ನಗರ, ಇಂಡಿ, ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ದೇವರಹಿಪ್ಪರಗಿ, ನಾಲತವಾಡ, ಆಲಮೇಲ, ಕೊಲ್ಹಾರ, ತಾಂಬಾ, ಹೊರ್ತಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಬಿರುಸಿನ ಮಳೆಯಾಗಿದೆ.

ಚಂಡಮಾರುತದ ಪರಿಣಾಮ ಮೂರ್ನಾಲ್ಕು ದಿನಗಳಿಂದ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ರಭಸದ ಗಾಳಿ ಬೀಸುತ್ತಿತ್ತು. ಆದರೆ, ಮಳೆಯಾಗಿರಲಿಲ್ಲ.

ADVERTISEMENT

ಒಂದು ತಿಂಗಳಿಂದ ರಾಜ್ಯದ ವಿವಿಧೆಡೆ ಮಳೆ ಅಬ್ಬರಿಸಿದ್ದರೂ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿರಲಿಲ್ಲ. ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗಿತ್ತು. ಈ ಮಳೆ ಕೃಷಿ ಚಟುವಟಿಕೆಗೆ ಅನುಕೂಲಕರವಾಗಿರಲಿಲ್ಲ. ಆದರೆ, ಗುರುವಾರ ಒಂದು ತಾಸಿಗೂ ಅಧಿಕ ಹೊತ್ತು ರಭಸದಿಂದ ಆದ ಮಳೆ ಕೃಷಿ ಚಟುವಟಿಕೆಗಳ ಪ್ರಾರಂಭಕ್ಕೆ ಮುನ್ನುಡಿ ಬರೆದಿದೆ.

ಕಳೆದ ಎರಡು–ಮೂರು ವರ್ಷಗಳಿಂದ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಹದ ಮಳೆಯಾಗಿರಲಿಲ್ಲ. ಬಿಸಿಲ ಬೇಗೆಯಿಂದ ಜನ, ಜಾನುವಾರು, ಪ್ರಾಣಿ ಪಕ್ಷಿಗಳು ತತ್ತರಿಸಿದ್ದವು. ಇದೀಗ ಸುರಿದ ಭಾರೀ ಮಳೆಯಿಂದ ತಂಪಾದ ವಾತಾವರಣ ಸೃಷ್ಟಿಯಾಗಿದೆ.

ವಿಜಯಪುರ ನಗರದಲ್ಲಿ ಸುಮಾರು ಒಂದೂವರೆ ತಾಸು ಸುರಿದ ಮಳೆಯಿಂದ ಚರಂಡಿಗಳು ಉಕ್ಕಿ ರಸ್ತೆ ಮೇಲೆ ನೀರು ಹರಿಯಿತು. ಇದರಿಂದ ಜನ ಸಂಚಾರಕ್ಕೆ, ವ್ಯಾಪಾರ, ವಹಿವಾಟಿಗೆ ಅಡಚಣೆಯಾಯಿತು.

ಗಾಳಿ–ಮಳೆಗೆ ವಿದ್ಯುತ್‌ ಸಂಪರ್ಕ ಕೈಕೊಟ್ಟ ಪರಿಣಾಮ ಬಹಳ ಹೊತ್ತು ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.