ADVERTISEMENT

ಹೊಸಪೇಟೆ: ಗಣಪನ ತಯಾರಕರಲ್ಲಿ ಮಂದಹಾಸ

ಸಾರ್ವಜನಿಕ ಗಣೇಶ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ: ಕೆಲಸ ಚುರುಕು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಆಗಸ್ಟ್ 2022, 19:30 IST
Last Updated 18 ಆಗಸ್ಟ್ 2022, 19:30 IST
ಗಣೇಶ ಚತುರ್ಥಿಗೆ ಇನ್ನೆರಡೇ ವಾರ ಬಾಕಿ ಉಳಿದಿದ್ದು, ಪಶ್ಚಿಮ ಬಂಗಾಳದ ಕಲಾವಿದರು ಹೊಸಪೇಟೆಯಲ್ಲಿ ಗಣಪನ ಮೂರ್ತಿಗಳನ್ನು ತಯಾರಿಸಿ, ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.
ಗಣೇಶ ಚತುರ್ಥಿಗೆ ಇನ್ನೆರಡೇ ವಾರ ಬಾಕಿ ಉಳಿದಿದ್ದು, ಪಶ್ಚಿಮ ಬಂಗಾಳದ ಕಲಾವಿದರು ಹೊಸಪೇಟೆಯಲ್ಲಿ ಗಣಪನ ಮೂರ್ತಿಗಳನ್ನು ತಯಾರಿಸಿ, ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.   

ಹೊಸಪೇಟೆ (ವಿಜಯನಗರ): ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ಗಣಪನ ಮೂರ್ತಿ ತಯಾರಕರ ಮೊಗದಲ್ಲಿ ಮಂದಹಾಸ ಮರಳಿದೆ.

ಕೋವಿಡ್‌ನಿಂದ ಸತತ ಎರಡು ವರ್ಷ ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಿಸಿರಲಿಲ್ಲ. ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದವರು ಅತಂತ್ರವಾಗಿದ್ದರು. ಪ್ರತಿವರ್ಷ ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಂದ ಅನೇಕ ಕಲಾವಿದರು ನಗರಕ್ಕೆ ಬಂದು ಮೂರ್ತಿ ತಯಾರಿಸುತ್ತಿದ್ದವರು ಈ ಕಡೆ ಬಂದಿರಲಿಲ್ಲ. ಆದರೆ ಈ ಬಾರಿ ಮೂರ್ತಿ ತಯಾರಕರು ನಗರಕ್ಕೆ ಬಂದು, ಹಗಲಿರುಳೆನ್ನದೇ ಶ್ರಮಿಸಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

‌ನಗರದ ನೆಹರೂ ಕಾಲೊನಿ, ಬಳ್ಳಾರಿ ರಸ್ತೆ, ರಾಮ ಟಾಕೀಸ್‌ ಬಳಿ ಜಾಗವನ್ನು ಬಾಡಿಗೆಗೆ ಪಡೆದು, ಶೆಡ್‌ ಹಾಕಿ ಅದರೊಳಗೆ ವಿವಿಧ ವಿನ್ಯಾಸ, ಆಕಾರದ ಗಣಪನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕಲಾವಿದರು ಪಿ.ಒ.ಪಿ ಬದಲು ಮಣ್ಣಿನ ಮೂರ್ತಿಗಳಿಗೆ ಒತ್ತು ಕೊಟ್ಟಿದ್ದು ಗಮನಾರ್ಹ.

ADVERTISEMENT

ಪಶ್ಚಿಮ ಬಂಗಾಳದಿಂದ 150ಕ್ಕೂ ಹೆಚ್ಚು ಕಲಾವಿದರು ದಶಕಗಳಿಂದ ಹೊಸಪೇಟೆ ನಗರಕ್ಕೆ ಬಂದು ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವರು ಬಂಗಾಳದಲ್ಲಿ ದುರ್ಗಾದೇವಿಯ ಬೃಹತ್‌ ಮೂರ್ತಿಗಳನ್ನು ತಯಾರಿಸುವುದರಲ್ಲಿ ನಿಷ್ಣಾತರಾಗಿದ್ದಾರೆ. ಪ್ರತಿ ವರ್ಷ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಈ ವರ್ಷ ನಟ, ದಿವಂಗತ ಪುನೀತ್‌ ರಾಜಕುಮಾರ್‌ ಅವರು ಗಣಪನೊಂದಿಗೆ ಇರುವ ಮೂರ್ತಿ ತಯಾರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

5–15 ಅಡಿ ಎತ್ತರದ ವರೆಗೆ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಕೆಲವರು ಮುಂಚಿತವಾಗಿ ಹಣ ಪಾವತಿಸಿ, ಬೇಡಿಕೆ ಸಲ್ಲಿಸುತ್ತಾರೆ. ಇನ್ನು, ಕಲಾವಿದರು ಇತ್ತೀಚಿನ ಕೆಲ ವರ್ಷಗಳಿಂದ ಮೂರ್ತಿಗಳ ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅನೇಕರು ಅದನ್ನು ನೋಡಿಯೇ ಬೇಡಿಕೆ ಸಲ್ಲಿಸುತ್ತಿದ್ದಾರೆ.

ನೆಹರೂ ಕಾಲೊನಿಯ ಶೆಡ್‌ಗೆ ಸಿಂಧನೂರಿನಿಂದ ಬಿ.ಎಸ್‌. ಪಾಟೀಲ ಎಂಬುವರು ಬಂದು ಮೂರ್ತಿ ಖರೀದಿಸಿದ್ದಾರೆ. ಅವರ ಊರಿನಲ್ಲಿ ಪಿ.ಒ.ಪಿ. ಬಿಟ್ಟರೆ ಬೇರೆ ಮೂರ್ತಿಗಳು ಸಿಗುವುದಿಲ್ಲ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯೇ ಖರೀದಿಸಿ ಪ್ರತಿಷ್ಠಾಪಿಸಬೇಕೆಂದು ಇಲ್ಲಿಗೆ ಬಂದಿದ್ದರು. ಹೀಗೆ ಸಾರ್ವಜನಿಕರು, ವಿವಿಧ ಗಣೇಶ ಮಂಡಳಿಗಳವರು ಬಂದು ಬೇಡಿಕೆ ಸಲ್ಲಿಸುತ್ತಿರುವುದರಿಂದ ಕಲಾವಿದರು ಸಂತಸಗೊಂಡಿದ್ದಾರೆ.

‘ಕೋವಿಡ್‌ನಿಂದ ಎರಡು ವರ್ಷ ಮೂರ್ತಿಗಳನ್ನು ತಯಾರಿಸಿರಲಿಲ್ಲ. ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದೆವು. ಈ ವರ್ಷ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿರುವುದು ಖುಷಿಯ ವಿಚಾರ. ಈಗಾಗಲೇ ಅನೇಕರು ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಮಣ್ಣಿನ ಮೂರ್ತಿಗಳನ್ನಷ್ಟೇ ತಯಾರಿಸಲಾಗಿದ್ದು, ಅಂತಿಮ ಸ್ಪರ್ಶ ನೀಡುವುದಷ್ಟೇ ಬಾಕಿ’ ಎಂದು ನದಿಯಾ ಜಿಲ್ಲೆಯ ನಿರ್ಮಲ್‌ ಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.