
ಹಗರಿಬೊಮ್ಮನಹಳ್ಳಿ: ನಿಜ ಶರಣ ಅಂಬಿಗರ ಚೌಡಯ್ಯನವರು ಜಗಜ್ಯೋತಿ ಬಸವಣ್ಣನವರ ಸಮಕಾಲೀನ ಶ್ರೇಷ್ಠ ವಚನಕಾರ ಎಂದು ಗಂಗಾಮತ ಸಮಾಜದ ಮುಖಂಡ ಬಾರಿಕರ ಬಾಪೂಜಿ ಅಭಿಪ್ರಾಯಪಟ್ಟರು.
ಪಟ್ಟಣಕ್ಕೆ ಆಗಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ಸಂಚಾರಿ ಪೀಠ ಸ್ವಾಗತಿಸಿ ಅವರು ಮಾತನಾಡಿದರು.
‘ನೇರ, ನಿಷ್ಠುರವಾಗಿ ವಚನಗಳನ್ನು ಬರೆದ ಚೌಡಯ್ಯನವರು ಸಮಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೋಣಿ ನಡೆಸುವ ಅಂಬಿಗನಾಗಿ ಸೇವೆ ಮಾಡುತ್ತಲೇ ನೂರಾರು ವಚನಗಳನ್ನು ಬರೆಯುವ ಮೂಲಕ ವಚನ ಸಾಹಿತ್ಯಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ’ ಎಂದರು.
ನೌಕರರ ಸಂಘದ ಅಧ್ಯಕ್ಷ ಬಿ.ಮಾರುತೇಶ್ ಮಾತನಾಡಿ, ‘ವಚನ ಜ್ಯೋತಿ ಸಂಚಾರಿ ಪೀಠ ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಆರಂಭಗೊಂಡು ರಾಜ್ಯದ ಎಲ್ಲ ತಾಲ್ಲೂಕುಗಳು ಮತ್ತು ಹೋಬಳಿ ಕೇಂದ್ರಗಳಿಗೆ ಸಂಚರಿಸಿ ಚೌಡಯ್ಯನವರ ಗ್ರಂಥಗಳನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವ ಕೆಲಸ ಮಾಡುತ್ತಿದೆ’ ಎಂದರು.
ಗಂಗಾಮತ ಬೆಸ್ತ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸರ್ದಾರ ಯಮನೂರಪ್ಪ, ಬಾರಿಕರ ನಿಂಗಪ್ಪ, ಅಕಾರಿ ಪಂಪಣ್ಣ, ಸರ್ದಾರ್ ಸಿದ್ದಣ್ಣ, ಸರ್ದಾರ್ ವಸಂತಕುಮಾರ್, ಎಚ್.ಹುಲುಗಪ್ಪ, ಬಾರಿಕರ ಫೋಟೊ ಶೇಖರ್, ಅಂಬಿಗರ ಪುನೀತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.