ಸಿಂದಗಿ: ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ವಿಜಯಪುರ ಜಿಲ್ಲೆಗೆ ₹400 ಕೋಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮಂಜೂರು ನೀಡಿವೆ. ಈಗಾಗಲೇ ₹65 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. 2024-25ನೇ ಸಾಲಿನ ಈ ಅನುದಾನ ಸಂಪೂರ್ಣ ವೆಚ್ಚ ಮಾಡಬೇಕಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ಅಮೃತ 2.0 ಯೋಜನೆಯಡಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
’₹1800 ಕೋಟಿ ವೆಚ್ಚದಲ್ಲಿ ಆರು ರಾಷ್ಟ್ರೀಯ ಹೆದ್ದಾರಿ ವಿಜಯಪುರಕ್ಕೆ ಸೇರಿಕೊಳ್ಳುತ್ತವೆ. ವಾಹನಗಳ ಸಂಚಾರ ವಿಪರೀತವಾಗುವು ದರಿಂದ ಅಪಘಾತಗಳು ಸಂಭವಿಸಬಾರದು ಎಂದು ₹750 ಕೋಟಿ ವೆಚ್ಚದಲ್ಲಿ 747 ಕಿ.ಮೀ ಉದ್ದದ ಪೆರಿಪೆರಿಯಲ್ ರಸ್ತೆಯ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿರುವೆ’ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಮನಗೂಳಿ ಮಾತನಾಡಿ, ’ಚುನಾವಣೆಯಲ್ಲಿ ಒಂದು ತಿಂಗಳು ರಾಜಕೀಯ ಮಾಡೋಣ ಇನ್ನುಳಿದ 59 ತಿಂಗಳು ಅಭಿವೃದ್ಧಿಗೆ ಮುಂದಾಗೋಣ. ಸಂಸದ ರಮೇಶ ಜಿಗಜಿಣಗಿ ಅವರಿಗೆ ಕೇಂದ್ರದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಪ್ರಭಾವವಿದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕರು ಸಂಸದರಿಗೆ ಸಿಂದಗಿ-ಕೊಡಂಗಲ್ ರಸ್ತೆ, ವಿಜಯಪುರಕ್ಕೆ ವಂದೇ ಭಾರತ ರೈಲು, ಸಿಂದಗಿ ಪಟ್ಟಣಕ್ಕೆ ಒಳಾಂಗಣ ಕ್ರೀಡಾಂಗಣ, ವಿಜಯಪುರ-ಬೆಂಗಳೂರಿಗೆ ಇನ್ನೊಂದು ಸೂಪರ್ ರೈಲು ಪ್ರಾರಂಭಿಸುವಂತೆ ಕೇಂದ್ರ ಸರ್ಕಾರರಿಂದ ಮಂಜೂರಾತಿ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ’ಶಾಸಕರು ಮತ್ತು ಸಂಸದರ ಮಾರ್ಗದರ್ಶನದಲ್ಲಿ ಪಟ್ಟಣದ ₹23 ವಾರ್ಡ್‌ಗಳ ಅಭಿವೃದ್ಧಿಗಾಗಿ ಶ್ರಮಿಸುವೆ’ ಎಂದು ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಬೀರಗೊಂಡ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಗೋವಿಂದ ಎಸ್ ಇದ್ದರು.
ಸಿಂದಗಿ ಪಟ್ಟಣದ ಜನರ ಬಹು ವರ್ಷಗಳ ಬೇಡಿಕೆ 24*7 ಕುಡಿಯುವ ನೀರು ಸರಬರಾಜು ಯೋಜನೆ ಈಗ ಸಾಕಾರಗೊಳ್ಳುತ್ತಿದೆ. ಇದೇ ಯೋಜನೆಯ ಎರಡನೇ ವಲಯದ ಕಾಮಗಾರಿಗೆ ಈಗಾಗಲೇ ₹40 ಕೋಟಿ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗಿದೆಅಶೋಕ ಮನಗೂಳಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.